ಚೆನ್ನೈ/ಬೆಂಗಳೂರು: ದಳಪತಿ ವಿಜಯ್ ಅವರ ಕೊನೆಯ ಸಿನಿಮಾವೆಂದು ಹೇಳಲಾಗುತ್ತಿರುವ ʼದಳಪತಿ 69ʼ ರಿಲೀಸ್‌ಗೂ ಮುನ್ನ ಭಾರೀ ಸೌಂಡ್ ಮಾಡುತ್ತಿದೆ.
ಹೆಚ್. ವಿನೋದ್ ನಿರ್ದೇಶನದ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಇದಲ್ಲದೆ ಪಾತ್ರವರ್ಗವೂ ರಿವೀಲ್ ಆಗಿದೆ. ಸಖತ್ ಕ್ರೇಜ್ ಹುಟ್ಟಿಸಿರುವ ʼದಳಪತಿ 69ʼ ಸಿನಿಮಾದಲ್ಲಿ ನಟಿಸುವ ಪಾತ್ರವರ್ಗವನ್ನು ಚಿತ್ರತಂಡ ಒಂದೊಂದಾಗಿ ರಿವೀಲ್ ಮಾಡುತ್ತಿದೆ.
ಪೂಜಾ ಹೆಗ್ಡೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಪ್ರಕಾಶ್ ರಾಜ್, ನರೇನ್ ರಾಮ್, ಪ್ರಿಯಾಮಣಿ , ಗೌತಮ್ ವಾಸುದೇವ್ ಮೆನನ್, ಮಮಿತಾ ಬೈಜು, ಬಾಬಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ.
ಇದೀಗ ವಿಜಯ್ ಸಿನಿಮಾದಲ್ಲಿ ಕನ್ನಡದ ಸೂಪರ್ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ.
ಈ ಬಗ್ಗೆ ಸ್ವತಃ ಶಿವರಾಜ್ ಕುಮಾರ್ ಅವರೇ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ವಿಜಯ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದೇನೆ. ಅದೊಂದು ಬ್ಯೂಟಿಫುಲ್ ಕ್ಯಾರೆಕ್ಟರ್ ಎಂದು ಹೇಳಿದ್ದಾರೆ.
ಅದೊಂದು ಸುಂದರ ಪಾತ್ರ. ಕೇಳಲು ಆಸಕ್ತಿದಾಯಕವಾಗಿದೆ. ಆ ಪಾತ್ರ ಹೇಗೆ ಮೂಡಿಬರುತ್ತದೆ ಅಂಥ ನನಗೆ ಗೊತ್ತಿಲ್ಲ. ವಿಜಯ್ ಒಬ್ಬ ಅದ್ಧುತ ನಟ. ಇದು ಅವರ ಕೊನೆಯ ಚಿತ್ರವೆಂದು ಹೇಳುತ್ತಿದ್ದಾರೆ. ವಿಜಯ್ ಅಂಥ ಕಲಾವಿದನ ಕೊನೆಯ ಸಿನಿಮಾವೆಂದು ಹೇಳಬಾರದು ಅಂಥ ನಾನು ಒಳ್ಳೆಯ ಸ್ನೇಹಿತನಾಗಿ ಹೇಳುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಸದ್ಯ ಶಿವರಾಜ್ ಕುಮಾರ್ ʼದಳಪತಿ 69ʼ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಕೇಳಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈಗಾಗಲೇ ಶಿವರಾಜ್ ಕುಮಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯವನ್ನು ನೋಡಿ ಕಾಲಿವುಡ್ ಮಂದಿ ಫಿದಾ ಆಗಿದ್ದರು.
ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ಸಿನಿಮಾಕ್ಕೆ ಬಂಡವಾಳ ಹಾಕಲಿದೆ.
ಶಿವರಾಜ್ ಕುಮಾರ್ ʼಭೈರತಿ ರಣಗಲ್ʼ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವಾರ (ನ.15ರಂದು) ಸಿನಿಮಾ ತೆರೆ ಕಾಣಲಿದೆ.