ಮೈಸೂರು: ಬಾಬಾ ಸಾಹೇಬ್ ಅಂಬೇಡ್ಕರ್ ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿ ಮಹಿಳೆಯರೂ ಸೇರಿದಂತೆ ಅಂಚಿಗೆ ನೂಕಲ್ಟಟ್ಟ ಜನವರ್ಗಗಳ ಸಬಲೀಕರಣಕ್ಕೆ ಐತಿಹಾಸಿಕ ಹೋರಾಟ ನಡೆಸಿದರೆಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ತಿಳಿಸಿದರು.
ಮಾನಸಗಂಗೋತ್ರಿಯ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಏರ್ಪಡಿಸಿದ್ದ ಅಂಬೇಡ್ಕರರ ೧೩೨ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ಕೊಡುಗೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಂಬೇಡ್ಕರ್ ಬುದ್ಧರ ಅನುಯಾಯಿ ಮತ್ತು ದಮನಿತ ಸಮುದಾಯಗಳ ರೂವಾರಿಯಾಗಿ ಮಹಿಳೆಯರ ಸಬಲೀಕರಣಕ್ಕೆ ರೂಪಿಸಿದ ಹಿಂದೂ ಕೋಡ್ ಬಿಲ್, ಹಿಂದೂ ವಿವಾಹ ಕಾನೂನು, ಹಿಂದೂ ಉತ್ತರಾಧಿಕಾರ ಕಾನೂನು, ಹಿಂದೂ ಅಪ್ರಾಪ್ತತೆ, ಪೋಷಕತ್ವ ಕಾನೂನು, ಹಿಂದೂ ದತ್ತಕ ಮತ್ತು ಜೀವನಾಂಶ ಕಾನೂನು ಮೊದಲಾದವುಗಳ ಪ್ರಸ್ತುತತೆಯನ್ನು ಪ್ರಧಾನವಾಗಿ ವಿಶದಪಡಿಸಿದರು. ಮಹಿಳೆಯರು ಮತ್ತು ಶೂದ್ರರ ಸಬಲೀಕರಣದ ಬಹುದೊಡ್ಡ ಅಡ್ಡಗಲ್ಲಾಗಿರುವ ಮನುವಿನಿಂದ ನಿರಾಕರಿಸಲ್ಪಟ್ಟ ಮಹಿಳೆಯರ ಹಕ್ಕುಬಾಧ್ಯತೆಗಳನ್ನು ಅಂಬೇಡ್ಕರ್ ಸಂವಿಧಾನದ ಮೂಲಕ ಒದಗಿಸಿದರೆಂದು ಪ್ರೊ.ಗುರು ಅಭಿಪ್ರಾಯಪಟ್ಟರು.
ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಸಾಂವಿಧಾನಿಕ ಪರಿಹಾರಗಳು, ಜೀವಿಸುವ ಹಕ್ಕುಗಳು, ಮೀಸಲು ಸೌಲಭ್ಯ ಮೊದಲಾದ ಅಂಶಗಳನ್ನು ಅಳವಡಿಸಿ ಅಂಬೇಡ್ಕರ್ ಮಹಿಳೆಯರ ಸಬಲೀಕರಣಕ್ಕೆ ಭದ್ರಬುನಾದಿ ಹಾಕಿರುವುದಾಗಿ ಅವರು ಪ್ರತಿಪಾದಿಸಿದರು.
ಸ್ವತಂತ್ರ ಭಾರತದಲ್ಲಿ ಅನುಷ್ಠಾನಗೊಳಿಸಲಾದ ಮಹಿಳಾ ಸಬಲೀಕರಣ ನೀತಿಗಳು ಮತ್ತು ಕಾರ್ಯಕ್ರಮಗಳು ಅಂಬೇಡ್ಕರ್‌ರ ದೂರದೃಷ್ಟಿಯನ್ನು ಪ್ರಧಾನವಾಗಿ ಆಧರಿಸಿವೆ. ಎಲ್ಲ ಮಹಿಳೆಯರಿಗೂ ನ್ಯಾಯೋಚಿತವಾಗಿ ಬದುಕುವ, ದುಡಿಯುವ ಮತ್ತು ಅಭಿವೃದ್ಧಿ ಹೊಂದುವ ಅವಕಾಶಗಳನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ವಿಶೇಷವಾಗಿ ಪರಿಚ್ಛೇದ ೩೨ರಲ್ಲಿ ಸಾಂವಿಧಾನಿಕ ಪರಿಹಾರಗಳನ್ನು ಅಂಬೇಡ್ಕರ್ ಅಳವಡಿಸಿ ರಾಜ್ಯ ಮಹಿಳೆಯರು ಮತ್ತು ಅಲಕ್ಷಿತ ಜನರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದ್ದಾರೆ. ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು ಪೌರಾಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ೧/೩ ಮೀಸಲಾತಿ ನೀಡುವ ಮೂಲಕ ನಾಯಕತ್ವ ಅವಕಾಶಗಳನ್ನು ಒದಗಿಸಿದ್ದಾರೆ. ಮಹಿಳೆಯರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಅಭಿವೃದ್ಧಿ ಮತ್ತು ನಾಯಕತ್ವ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅಂಬೇಡ್ಕರ್ ದೃಷ್ಟಿಕೋನವನ್ನು ಆಧರಿಸಿವೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ.ಯಶೋಧ ಮಾತನಾಡಿ, ಭಾರತೀಯ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ವಹಿಸಿದ ಪಾತ್ರವನ್ನು ಕುರಿತಂತೆ ಬಾಬು ರಾಜೇಂದ್ರ ಪ್ರಸಾದ್, ಪಂಡಿತ್ ಜವಾಹರಲಾಲ್ ನೆಹರು, ಟಿ.ಟಿ.ಕೃಷ್ಣಮಾಚಾರಿ ಮೊದಲಾದ ರಾಷ್ಟ್ರನಾಯಕರ ವಿಚಾರಧಾರೆಗಳನ್ನು ಅವರು ಪ್ರಸ್ತುತಪಡಿಸಿದರು. ವಿಭಾಗದ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.