Sunday, April 20, 2025
Google search engine

Homeಸ್ಥಳೀಯಅಗ್ನೀವೀರ್ ನೇಮಕ: ೪೯೨ ಅಭ್ಯರ್ಥಿಗಳು ಭಾಗಿ

ಅಗ್ನೀವೀರ್ ನೇಮಕ: ೪೯೨ ಅಭ್ಯರ್ಥಿಗಳು ಭಾಗಿ

ಮೈಸೂರು: ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಮಂಗಳವಾರ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದು, ಮೊದಲ ದಿನ ೬೭ ಅಭ್ಯರ್ಥಿಗಳು ಗೈರಾಗಿದ್ದಾರೆ.
ಮೊದಲ ದಿನ ದೈಹಿಕ ಪರೀಕ್ಷೆಯಲ್ಲಿ ೫೫೯ ಅಭ್ಯರ್ಥಿಗಳ ಪೈಕಿ ೪೯೨ ಅಭ್ಯರ್ಥಿಗಳು ಭಾಗಿಯಾಗಿ ತಮ್ಮ ದೈಹಿಕ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್, ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಏಪ್ರಿಲ್ ತಿಂಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು. ಅರ್ಹತೆ ಪಡೆದ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಜತೆಗೆ ದೈಹಿಕ ಪರೀಕ್ಷೆಯ ಜತೆಗೆ ವೈದ್ಯಕೀಯ ಪರೀಕ್ಷೆ, ಅಭ್ಯರ್ಥಿಗಳ ದಾಖಲೆ ಪರಿಶೀಲನೆಯೂ ನಡೆಯಿತು.
ಅಭ್ಯರ್ಥಿಗಳು ೫ ನಿಮಿಷ ೪೫ ಸೆಕೆಂಡ್‌ಗಳಲ್ಲಿ ೧,೬೦೦ ಮೀಟರ್ ಓಟ ಪೂರ್ಣಗೊಳಿಸುವುದು, ೪೦೦ ಮೀಟರ್ ಟ್ರಾಕ್ ಓಟ, ೧೦ ಫುಲ್ ಹಬ್ಸ್ ಪೂರ್ಣಗೊಳಿಸುವುದು, ಎತ್ತರ, ತೂಕ ಮತ್ತು ಆರೋಗ್ಯ ಪರೀಕ್ಷೆಗಳು ನಡೆದವು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಮಂಡ್ಯ, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಎದುರಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಧ್ವಜಾರೋಹಣ ನೆರವೇರಿಸುವ ಮೂಲಕ ನಾಲ್ಕು ದಿನಗಳ ಸೇನಾ ನೇಮಕಾತಿ ರ್‍ಯಾಲಿಗೆ ಚಾಲನೆ ನೀಡಿದರು. ನೇಮಕಾತಿ ಅಧಿಕಾರಿ ಗೌರವ್ ತಪ್ಪಾ, ನೋಡಲ್ ಅಧಿಕಾರಿ ಮೇಜರ್ ಡಾ.ಜೆ.ಆರ್.ಬಾಲಸುಬ್ರಹ್ಮಣ್ಯಂ ಇತರರಿದ್ದರು.
ಆ.೪ರವರೆಗೆ ರ್‍ಯಾಲಿ: ಭಾರತೀಯ ಸೇನೆ ಬೆಂಗಳೂರು ವಿಭಾಗದ ನೇಮಕಾತಿ ಅಧಿಕಾರಿ ಗೌರವ್ ತಪ್ಪಾ ನೇತೃತ್ವದಲ್ಲಿ ದೈಹಿಕ ಪರೀಕ್ಷೆ ಆ.೪ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯದ ೧೪ ಜಿಲ್ಲೆಗಳಿಂದ ೧,೭೨೩ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಬೇಕಿದೆ. ಈ ಸಂಬಂಧ ಮೊದಲ ದಿನ ೫೫೯ ಅಭ್ಯರ್ಥಿಗಳ ಪರೀಕ್ಷೆಗೆ ನಿಗದಿ ಮಾಡಲಾಗಿತ್ತು. ಉಳಿದ ಅಭ್ಯರ್ಥಿಗಗಳಿಗೆ ಉಳಿದ ದಿನ ನಡೆಯಲಿದೆ.
ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿರುವ ಅಭ್ಯರ್ಥಿಗಳಿಗೆ ನಂಜರಾಜ್ ಬಹದ್ದೂರ್ ಛತ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಭ್ಯರ್ಥಿಗಳನ್ನು ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಕರೆತರಲು ನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ದಿನವೂ ಬೆಳಗ್ಗೆ ೬ ಗಂಟೆಗೆ ರ್‍ಯಾಲಿ ಆರಂಭಗೊಳ್ಳಲಿದ್ದು, ಸಂಜೆ ೫ ಗಂಟೆಯೊಳಗೆ ಮುಕ್ತಾಯಗೊಳ್ಳಲಿದೆ. ಬೆಳಗ್ಗೆ ೮.೩೦ಕ್ಕೆ ತಿಂಡಿ, ಮಧ್ಯಾಹ್ನ ೧೨.೩೦ಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ.
ಸೇನಾ ನೇಮಕಾತಿ ರ್‍ಯಾಲಿಗೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ನೆರವು ನೀಡಿದೆ. ಭದ್ರತೆಗೆ ಪೊಲೀಸರು, ಆರೋಗ್ಯ ಇಲಾಖೆ ವತಿಯಿಂದ ವೈದ್ಯಕೀಯ ಸಹಕಾರ ನೀಡಲಾಗಿದೆ.

RELATED ARTICLES
- Advertisment -
Google search engine

Most Popular