ಮೈಸೂರು: ದೇವರಾಜ ಅರಸು ಅವರು ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಿದ್ದರಿಂದ ಸಾವಿರಾರು ಬಡವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಅನುಕೂಲವಾಯಿತು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಕುವೆಂಪುನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ ೪೧ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಅನನುಕೂಲವಾಗಿದ್ದ ದಿನಗಳಲ್ಲಿ ಅರಸು ಅವರು ವಿದ್ಯಾರ್ಥಿನಿಲಯಗಳಿಗೆ ಆದ್ಯತೆ ನೀಡಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿದೆ. ಸರ್ಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿದವರು ಒಂದೆಡೆ ಸೇರಿ ಡಿ.ದೇವರಾಜ ಅರಸು ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಬೇಕು. ಈ ಮೂಲಕ ಭಾರತದ ರಾಜಕೀಯ ಇತಿಹಾಸದಲ್ಲಿ ಅರಸು ಹೆಸರು ಸದಾ ಸ್ಮರಣೀಯವಾಗಲಿದೆ ಎಂದರು.
ಸಮಾಜ, ಸರ್ಕಾರ, ಇಲಾಖೆ ನನಗೆ ಏನು ಕೊಟ್ಟಿದೆ ಎನ್ನುವುದು ಮುಖ್ಯವಲ್ಲ. ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯವಾಗಿದೆ. ಯಾವ ರಾಜ್ಯ ಅಥವಾ ದೇಶದಲ್ಲಿ ಅಕ್ಷರ ಮತ್ತು ಆರೋಗ್ಯಕ್ಕೆ ಪ್ರಾಶಸ್ತ್ಯ ನೀಡಿದೆಯೋ ಅಂತಹ ರಾಜ್ಯ, ದೇಶ ಬಲವಾಗುತ್ತವೆ. ಅಲ್ಲಿನ ಜನರು ಸಹ ಪ್ರಬಲರಾಗುತ್ತಾರೆ ಎಂದು ಹೇಳಿದರು.
ಬಿ.ಸಿ.ಎಂ. ಹಾಸ್ಟೆಲ್‌ನ ಹಿರಿಯ ವಿದ್ಯಾರ್ಥಿಗಳಾದ ಡಾ. ಮಾಲೇಗೌಡ, ಶೈಲಜ, ಸವಿತಾ ಇತರರು ಅರಸು ಅವರ ಕುರಿತು ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ್, ಕಾಂಗ್ರೆಸ್ ವಕ್ತಾರ ಎಚ್.ಎ.ವೆಂಕಟೇಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಜಿ.ಪಂ. ಮಾಜಿ ಸದಸ್ಯರಾದ ಕೆ. ಮಾರುತಿ, ಮುಖಂಡರಾದ ಮಡೆಶಿವರಾಂ, ಕುನ್ನೇಗೌಡ, ಜಯರಾಮೇಗೌಡ, ಶಿವಣ್ಣ, ಸೋಮಸುಂದರ್, ಲೋಕೇಶ್, ತಾಲೂಕು ಕಲ್ಯಾಣಾಧಿಕಾರಿಗಳಾದ ಮೇಘಾ, ಚಂದ್ರಕಲಾ, ಶಶಿಕಲಾ, ಹರೀಶ್, ನಿಲಯಪಾಲಕರು ಇದ್ದರು.
ಅರಸು ಅವರಿಂದ ವಿದ್ಯಾರ್ಥಿಗಳಿಗೆ ಅನುಕೂಲ
RELATED ARTICLES