ನವದೆಹಲಿ/ಮಂಡ್ಯ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲದ ಕರಿಛಾಯೆ ಆವರಿಸಿರುವ ನಡುವೆ ಕಾವೇರಿ ನೀರು ನಿರ್ವಹಣಾ ಮಂಡಳಿಯಿಂದ ಮತ್ತೊಂದು ಶಾಕ್ ಎದುರಾಗಿದೆ. ಮಂಡ್ಯದ ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಅಕ್ಟೋಬರ್ 31 ರವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತೊಮ್ಮೆ ಆದೇಶ ನೀಡಿದೆ.
ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದ ಕಾವೇರಿ ನೀರು ನಿರ್ವಹಣಾ ಮಂಡಳಿಯು ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಮತ್ತೊಮ್ಮೆ ಶಾಕ್ ನೀಡಿದೆ. ಕಳೆದೆರಡು ದಿನಗಳ ಹಿಂದೆ (ಅಕ್ಟೋಬರ್ 11) ನಡೆದ ಸಭೆಯಲ್ಲೂ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿತ್ತು. ಇದು ಭಾರಿ ರಾಜಕೀಯ ವಿರೋಧಕ್ಕೆ ಕಾರಣವಾಗಿತ್ತು. ಕಳೆದ ಕೆಲವು ದಿನಗಳಿಂದ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಕಾವೇರಿ ನದಿ ಹಂಚಿಕೆಗೆ ಸಂಬಂಧ ರೈತರು ಮತ್ತು ಇತರ ಸಂಘಟನೆಗಳ ಕಾರ್ಯಕರ್ತರಿಂದ ಭಾರೀ ಪ್ರತಿಭಟನೆ ನಡೆಸುತ್ತಿವೆ. ಕೆಲ ದಿನಗಳ ಹಿಂದೆ ಕರ್ನಾಟಕ ಬಂದ್ ಕೂಡ ನಡೆದಿತ್ತು.
ಕಾವೇರಿ ನೀರು ನಿರ್ವಹಣಾ ಮಂಡಳಿಯ ಇಂದಿನ ಆದೇಶಕ್ಕೂ ಮುನ್ನ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಅವರು, ಸಿಡಬ್ಲ್ಯುಎಂಎ ಸಭೆಯಲ್ಲಿ ಕಾವೇರಿ ನದಿಯಿಂದ 16,000 ಕ್ಯೂಸೆಕ್ ನೀರನ್ನು ಕರ್ನಾಟಕ್ಕೆ ಬಿಡುವಂತೆ ತಮ್ಮ ಸರ್ಕಾರ ಒತ್ತಾಯಿಸಲಿದೆ ಎಂದು ಹೇಳಿದ್ದರು.
ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ಕಿಚ್ಚು:
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಮಂಡ್ಯದಲ್ಲಿ ಕಾವೇರಿ ಕಿಚ್ಚು ಭುಗಿಲೆದ್ದಿದ್ದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಹೆದ್ದಾರಿ ತಡೆದು ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ರಸ್ತೆ ತಡೆ ಪ್ರತಿಭಟನೆಯಲ್ಲಿ ವೈದ್ಯರ ಸಂಘ, ವಿವಿಧ ಕನ್ನಡಪರ, ರೈತ ಪರ ಸಂಘಟನೆಗಳ ಸಾಥ್ ನೀಡಿದ್ದವು . ಹೆದ್ದಾರಿ ತಡೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
