ಮೈಸೂರು: ಎಪಿಎಂಸಿ ಕಾಯ್ದೆ ಹಿಂಪಡೆಯುವ ಸರ್ಕಾರದ ನಿರ್ಧಾರವನ್ನು ರೈತ ಮುಖಂಡ ಬಡಗಲಪುರ ನಾಗೇಂದ್ರ ಸ್ವಾಗತಿಸಿದ್ದಾರೆ.
ಎಪಿಎಂಸಿ ಕಾಯ್ದೆ ಹಿಂಪಡೆಯಲು ಸರ್ಕಾರ ನಿರ್ಧಾರ ಮಾಡಿದ ಹಿನ್ನೆಲೆ ಮೈಸೂರಿನಲ್ಲಿ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತ ಸಂಘಟನೆ ಮುಖಂಡರು ಎಪಿಎಂಸಿ ಮುಂದೆ ಸಿಹಿ ಹಂಚಿ ಸಂಭ್ರಮಿಸಿದರು. ಇದು ರೈತರ ಹೋರಾಟಕ್ಕೆ ಸಿಕ್ಕ ಮೊದಲ ಜಯ. ಕಾಯ್ದೆ ಹಿಂಪಡೆದಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದ. ಹೀಗೆಯೇ ಭೂ ಸುಧಾರಣೆ ಕಾಯ್ದೆ ಹಾಗೂ ಗೋಹತ್ಯಾ ನಿಷೇಧ ಕಾಯ್ದೆ ವಾಪಸ್ಸು ಪಡೆಯಲಿ. ಈ ಮೂಲಕ ರೈತರ ರಕ್ಷಣೆ ಮಾಡಲಿ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ಇನ್ನು ಪಠ್ಯ ಪರಿಷ್ಕರಣೆ ಮಾಡಲು ಮುಂದಾಗಿರುವುದು ಕೂಡ ಸ್ವಾಗತಾರ್ಹ. ಎಪಿಎಂಸಿಯನ್ನು ರೈತ ಸ್ನೇಹಿ ಮಾಡಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಇದೇ ರೀತಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಸಹ ಹಿಂಪಡೆಯಬೇಕು. ಆ ಮೂಲಕ ರೈತ ಸಮುದಾಯದ ಪರ ಸರ್ಕಾರ ನಿಲ್ಲಬೇಕು ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದರು.