
ಬೆಂಗಳೂರು : ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಈಗಾಗಲೇ ಬ್ಯಾಚುಲರ್ ಆಫ್ ಸೈನ್ಸ್ ಡಿಗ್ರಿ ಕೋರ್ಸ್ ಗಳು ಚಾಲ್ತಿಯಲ್ಲಿವೆ. ಆದರೆ, ಸ್ಥಳದ ಅಭಾವದ ಕಾರಣ ಹೆಚ್ಚಿನ ಸಂಖ್ಯೆಗಳಲ್ಲಿ ವಿದ್ಯಾರ್ಥಿಗಳು ದಾಖಲಾಗಲು ಸಾಧ್ಯವಿಲ್ಲ. ಹೀಗಾಗಿ ಭಾರತದಲ್ಲೇ ಮೊದಲು ಬಾರಿಗೆ ಆನಲೈನ್ ಮೂಲಕ ಎಲೆಕ್ಟ್ರಾನಿಕ್ ಸಿಸ್ಟಂ ಕುರಿತ 4 ವರ್ಷದ ಬ್ಯಾಚುಲರ್ ಆಫ್ ಸೈನ್ಸ್ ಕೋರ್ಸ್ನ್ನು ಐಐಟಿ ಮದ್ರಾಸ್ನಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಪ್ರಾರಂಭಿಸಲಾಗುತ್ತದೆ ಎಂದು ಐಐಟಿ ಮದ್ರಾಸ್ನ ಪ್ರೊ ದೇವೇಂದ್ರ ಜಾಲಿಹಾಳ್ ಹೇಳಿದರು.
ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ನೆಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಐಐಟಿ ಮದ್ರಾಸ್ ಬಿಎಸ್ (ಎಲೆಕ್ಟ್ರಾನಿಕ್ ಸಿಸ್ಟಮ್ಸ್) ಪ್ರೋಗ್ರಾಂ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಕರ್ನಾಟಕದ ಬೆಳವಣಿಗೆಗೆ ಶಕ್ತಿ ತುಂಬಲು ಸಿದ್ಧವಾಗಿದೆ. ಐಐಟಿ ಮದ್ರಾಸ್ ಸ್ಥಳೀಯ ಎಲೆಕ್ಟ್ರಾನಿಕ್ಸ್ ಉದ್ಯಮದ ವೇಗವಾಗಿ ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಲು ಈ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ. ಉದ್ಯಮ ನಿರ್ದಿಷ್ಟ ಅವಶ್ಯಕತೆಗಳು ಮತ್ತು ಸ್ಕಿಲ್ ಸೆಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಕೋರ್ಸ್ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉದ್ಯಮದ ತಜ್ಞರೊಂದಿಗೆ ಸಮಾಲೋಚಿಸಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು, ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವು 25ನೇ ಜೂನ್ 2023 ರಂದು ಮುಕ್ತಾಯವಾಗುತ್ತದೆ. ಆಸಕ್ತರು https://study.iitm.ac.in/es/ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರೊ ದೇವೇಂದ್ರ ಜಾಲಿಹಾಳ್ ತಿಳಿಸಿದರು.
ಕೋರ್ಸ್ಅನ್ನು ಆನ್‌ಲೈನ್ ಮೋಡ್‌ನಲ್ಲಿ ನೀಡಲಾಗುವುದು. ಮತ್ತು ಆದ್ದರಿಂದ, ಇದು ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಭೌತಶಾಸ್ತ್ರ ಮತ್ತು ಗಣಿತದೊಂದಿಗೆ 12 ನೇ ತರಗತಿಯನ್ನು ಪೂರ್ಣಗೊಳಿಸಿದವರು ವಯಸ್ಸು ಅಥವಾ ಭೌಗೋಳಿಕ ಸ್ಥಳವನ್ನು ಪರಿಗಣಿಸದೆ ಅರ್ಜಿ ಸಲ್ಲಿಸಬಹುದು. ವಿಷಯ, ಟ್ಯುಟೋರಿಯಲ್‌ಗಳು, ಕಾರ್ಯಯೋಜನೆಗಳು ಆನ್‌ಲೈನ್‌ನಲ್ಲಿರುತ್ತವೆ. ಆದರೆ ರಸಪ್ರಶ್ನೆಗಳು, ಪರೀಕ್ಷೆಗಳು ಮತ್ತು ಲ್ಯಾಬ್‌ಗಳನ್ನು ವೈಯಕ್ತಿಕವಾಗಿ ನಡೆಸಲಾಗುತ್ತದೆ. ಲ್ಯಾಬ್ ಕೋರ್ಸ್‌ಗಳು ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ನಡೆಸಲಾಗುವುದು ಎಂದು ಪ್ರೊ ದೇವೇಂದ್ರ ಜಾಲಿಹಾಳ್ ಹೇಳಿದರು.
2025 ರ ವೇಳೆಗೆ ಎಲೆಕ್ಟ್ಟ್ರಾನಿಕ್ ಉದ್ಯಮದಲ್ಲಿ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿ 2,000 ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಉತ್ಪಾದನಾ ಉದ್ಯಮದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ. ಕರ್ನಾಟಕದ ಎಲೆಕ್ಟ್ಟ್ರಾನಿಕ್ ಕಂಪನಿಗಳ ಒಟ್ಟಾರೆ ಆದಾಯದಲ್ಲಿ ಮಹತ್ವದ ಹೆಚ್ಚಳವನ್ನು ಮಾಡುವ ಮೂಲಕ 2025 ರ ವೇಳೆಗೆ 40 ಶತಕೋಟಿಗೆ ಡಾಲರ್ ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪ್ರೊ ಮಾಹಿತಿ ನೀಡಿದರು.
ಬಳಿಕ ಐಐಟಿ ಮದ್ರಾಸ್ ನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಪ್ರೊ ವೀರರಾಘವನ್ ಜಾನಕಿರಾಮನ್ ಮಾತನಾಡಿ, ಜಾಗತಿಕ ಮಾರುಕಟ್ಟೆಗೆ ಮೂಲಭೂತ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುವ ಮೂಲಕ ಬಿಎಸ್ (ಎಲೆಕ್ಟ್ರಾನಿಕ್ ಸಿಸ್ಟಮ್ಸ್) ಪ್ರೋಗ್ರಾಂ ಪದವೀಧರರು ಎಲೆಕ್ಟ್ರಾನಿಕ್ ಅಥವಾ ಎಂಬೆಡೆಡ್ ಸಿಸ್ಟಮ್ ಡಿಸೈನ್ ಮತ್ತು ಅಭಿವೃದ್ಧಿ ಎಂಜಿನಿಯರ್ ಆಗಿ ಆಟೋಮೋಟಿವ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಮೊಬೈಲ್, ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ಉದ್ಯಮದಂತಹ ಬೇರೆ ಬೇರೆ ಉದ್ಯಮಗಳಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ವಿವಿಧ ಕಂಪನಿಗಳೊಂದಿಗೆ ಇಂಟರ್ನ್‌ಶಿಪ್/ಅಪ್ರೆಂಟಿಸ್‌ಶಿಪ್ ಅವಕಾಶಗಳನ್ನು ಪಡೆಯಬಹುದು. ಅಲ್ಲಿ ಅವರು ನಿಜ ಜೀವನದ ಯೋಜನೆಗಳಲ್ಲಿ ಕೆಲಸ ಮಾಡಲು ಮತ್ತು ಉದ್ಯಮವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಉತ್ತಮ ತಿಳುವಳಿಕೆಯನ್ನು ಪಡೆಯುತ್ತಾರೆ. ಈ ಇಂಟರ್ನ್‌ಶಿಪ್‌ಗಳು ಸೂಕ್ತ ಸ್ಟೈಫಂಡ್ ಅನ್ನು ಹೊಂದಿವೆ ಮತ್ತು ಇವು ಆಫ್‌ಲೈನ್, ಇನ್‌ಪರ್ಸನ್ ಅಥವಾ ಹೈಬ್ರಿಡ್ ಆಗಿರಬಹುದು ಮತ್ತು 2 ರಿಂದ 8 ತಿಂಗಳ ಅವಧಿಯನ್ನು ಹೊಂದಿರಬಹುದು.
ಈ ಇಂಟರ್ನ್‌ಶಿಪ್ ಅಥವಾ ಪ್ರೆಂಟಿಸ್‌ಶಿಪ್‌ಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕ್ರೆಡಿಟ್‌ಗಳನ್ನು ನೀಡಲಾಗುತ್ತದೆ. ಇಂಟರ್ನ್‌ಶಿಪ್‌ನಲ್ಲಿ ತೊಡಗಿರುವ ವಿದ್ಯಾರ್ಥಿಗಳು ಕೆಲವೊಮ್ಮೆ ಅಂತಿಮವಾಗಿ ಸಂಸ್ಥೆಯಿಂದ ನೇಮಕಾತಿಯನ್ನು ಪಡೆಯುತ್ತಾರೆ. ಈ ಮೂಲಕ ಉತ್ತಮ ವೃತ್ತಿಜೀವನದ ಬೆಳವಣಿಗೆಯನ್ನು ಸಾಧಿಸುತ್ತಾರೆ ಎಂದು ಅವರು ವಿವರಿಸಿದರು.