ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡದ ಅಭ್ಯರ್ಥಿಗಳ ಭಾಗವಹಿಸುವಿಕೆ ಹೆಚ್ಚಬೇಕು. ಹೀಗಾದಾಗ ನಮ್ಮೂರಿನ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಕಂಪು ಅನುರಣಿಸುತ್ತದೆ ಎಂದು ಪಶ್ಚಿಮ ಬಂಗಾಳ ಕೇಡರ್‌ನ ಐಎಎಸ್ ಅಧಿಕಾರಿ ಮಿಡ್ನಾಪುರ ವೆಸ್ಟ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಕರ್ನಾಟಕ ಮೂಲದ ಕೆಂಪಹೊನ್ನಯ್ಯ ತಿಳಿಸಿದರು.
ಗುರುವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಬ್ಯಾಂಕಿಂಗ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಆಯೋಜಿಸಿದ ೪೫ ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕಿಂಗ್, ಸೇನೆ, ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತರೆ ರಾಜ್ಯದವರಿಗೆ ನಾವು ಅವಕಾಶ ಬಿಟ್ಟು ಕೊಟ್ಟಿದ್ದೇವೆ. ಈ ಮನೋಭಾವ ಬದಲಾಗಬೇಕು. ಆಸೆಯ ಜತೆಗೆ ಮಹಾತ್ವಾಕಾಂಕ್ಷೆ ನಮ್ಮಲ್ಲಿರಬೇಕು. ದೊಡ್ಡ ಕನಸುಗಳನ್ನು ಕಂಡಾಗ ಉನ್ನತ ಸ್ಥಾನದ ಹಾದಿ ತಲುಪಲು ಸಹಾಯಕವಾಗುತ್ತದೆ. ಸವಾಲುಗಳನ್ನು ಮೆಟ್ಟಿ ನಿಂತು ದೇಶವ್ಯಾಪಿ ಕನ್ನಡಿಗರು ಗುರಿ ಸಾಧಿಸುವಂತಾಗಬೇಕು ಎಂದು ಹೇಳಿದರು.
ಬಾಲ್ಯದಲ್ಲೇ ಕಣ್ಣುಗಳೆರಡನ್ನೂ ಕಳೆದುಕೊಂಡು ಅಂಧತ್ವದ ನಡುವೆಯೂ ೨೦೧೬ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೩೪೦ನೇ ಶ್ರೇಣಿಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಿದ್ದು ಶಿಕ್ಷಣದಿಂದ, ಅದರ ಮೌಲ್ಯವನ್ನು ಅರಿತು ಸಾಗಬೇಕು. ಕೆಲವು ವರ್ಷ ಸತತ ಪರಿಶ್ರಮದಿಂದ ಅಧ್ಯಯನ ನಡೆಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ, ಮುಂದೆ ನೀವು ಹಾಗೂ ನಿಮ್ಮ ಕುಟುಂಬ ಆ ಉದ್ಯೋಗದ ನೆರಳಲ್ಲಿ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದರು.
ಸಾಧನೆಗಳನ್ನು ಸಾಕಾರಗೊಳಿಸಲು ತರಬೇತಿ ಅತ್ಯಗತ್ಯ. ಇಲ್ಲಿ ನಮ್ಮ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪವೂ ಇಂದು ಬದಲಾಗಿದೆ. ಹಿಂದೆ ಸಾಮಾನ್ಯ ಜ್ಞಾನ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಿದ್ದವು. ಆದರೆ, ಇಂದು ಪ್ರಚಲಿತ ವಿದ್ಯಮಾನ ಮತ್ತು ನಮ್ಮ ನಿರ್ಣಯ ಶಕ್ತಿಗಳನ್ನು ನಿರ್ಧರಿಸುವ ಪ್ರಶ್ನೆಗಳನ್ನು ಹೆಚ್ಚು ಕೇಳುತ್ತಿದ್ದಾರೆ. ಹೀಗಾಗಿ ನೀವು ಆ ರೀತಿಯ ಪ್ರಶ್ನೆಗಳಿಗೆ ತಯಾರಿ ನಡೆಸಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಗ್ರಾಮೀಣ ಯುವಕ ಯುವತಿಯರಿಗಾಗಿ ಈ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆದು, ದೇಶದ ಅತ್ಯುನ್ನತ ಹುದ್ದೆಗಳಿಗೆ ನಮ್ಮ ಕೇಂದ್ರದಿಂದಲೇ ತರಬೇತಿ ನೀಡಲು ನಿರ್ಧರಿಸಲಾಗಿದೆ. ಈ ಸಾಲಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿವಿಗೆ ಸೇರ್ಪಡೆ ಮಾಡಿಕೊಳ್ಳಲು ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಪ್ರವಾಸ ಕೈಗೊಂಡು ಪುಚಾರ ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಆನ್ನೈನ್ ಕೋರ್ಸ್‌ಗಳನ್ನು ತೆರೆಯಲಾಗುವುದು ಎಂದರು.
ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮಿ ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪವೀಣ, ಅಧ್ಯಯನ ಕೇಂದ್ರದ ಡೀನ್ ಪ್ರೊ.ರಾಮನಾಥಂ ನಾಯ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ತರಬೇತಿ ಕೇಂದ್ರದ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ. ಕೊಪ್ಪಲ್ ಇದ್ದರು. ಕುಮಾರಿ ಸಿ. ರಶ್ಮಿ ಪ್ರಾರ್ಥಿಸಿದರು.
ಕನ್ನಡದವರ ಭಾಗವಹಿಸುವಿಕೆ ಹೆಚ್ಚಾಗಬೇಕು
RELATED ARTICLES