ತಿ.ನರಸೀಪುರ: ವರುಣಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ರವರು ಹಾಗೂ ಬಿ.ಜೆ.ಪಿ. ಅಭ್ಯರ್ಥಿ ವಿ.ಸೋಮಣ್ಣ ರವರು ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿರುವುದರಿಂದ ವಿಧಾನಸಭಾ ಸದಸ್ಯತ್ವ ಅನರ್ಹಗೊಳಿಸಬೇಕೆಂದು ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗೀತಾ ರವರ ಮುಖಾಂತರ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಮಾತನಾಡಿದ ತೋಟದಪ್ಪ ಬಸವರಾಜು ರವರು ಮೇ.೧೦ರಂದು ನಡೆದ ವರುಣಾ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ರವರು ಹಾಗೂ ಬಿಜೆಪಿ. ಅಭ್ಯರ್ಥಿ ವಿ.ಸೋಮಣ್ಣ ರವರು ಚುನಾವಣಾ ನೀತಿಸಂಹಿತೆಗೆ ವಿರುದ್ಧವಾಗಿ ಪ್ರತಿಯೊಬ್ಬ ಮತದಾರನಿಗೆ ೨,೦೦೦ರೂ ನೀಡಿ ಮತ ಪಡೆದಿರುತ್ತಾರೆ. ಮತ್ತು ಚುನಾವಣೆಯಲ್ಲಿ ಅಕ್ರಮ ಹಾಗೂ ವಾಮಮಾರ್ಗ ಅನುಸರಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಚಾರ ಎಸಗಿರುತ್ತಾರೆ.
ಮುಂದುವರಿದು ಮಾತನಾಡಿದ ಅವರು ಸಿದ್ದರಾಮಯ್ಯನವರ ಆಯ್ಕೆಯನ್ನು ಅಸಿಂಧುಗೊಳಿಸಿ ಶಾಸಕ ಸ್ಥಾನದಿಂದ ವಜಾಗೊಳಿಸಿ ಮರುಚುನಾವಣೆ ನಡೆಸಬೇಕು, ಅಲ್ಲದೆ ಶ್ರೀ ವಿ.ಸೋಮಣ್ಣ, ಶ್ರೀ ಸಿದ್ದರಾಮಯ್ಯ ಇಬ್ಬರನ್ನು ಮುಂದಿನ ಕನಿಷ್ಟ ೧೦ ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೆಂದು ಕೋರಿದರು.
ಈ ಬಗ್ಗೆ ತನಿಖೆ ನಡೆಸಿ ಇವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಂಡು ಸಂವಿಧಾನದ ಆಶಯದಂತೆ ಕ್ರಮವಹಿಸಿ ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿಹಿಡಿಯಬೇಕಾಗಿ ಎಂದು ಹೇಳಿದರು.