ಗುಂಡ್ಲುಪೇಟೆ: ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳು ಅ.15ರೊಳಗೆ ಸಂಪೂರ್ಣವಾಗಿ ಜಾರಿಯಾಗಲಿದೆ. ರಾಜ್ಯದ ಜನರು ತಾಳ್ಮೆಯಿಂದ ಇರಬೇಕೆಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಮನವಿ ಮಾಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದ ಜಿ.ಪಿ.ಗ್ರೌಂಡ್‍ನಲ್ಲಿ ನಡೆದ ಗುಂಡ್ಲುಪೇಟೆ ಕ್ಷೇತ್ರದ ಮತದಾರರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಪೂರೈಸಲು ಹಣವಿಲ್ಲ. ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿ, ಜೆಡಿಎಸ್ ಪಕ್ಷದವರು ಬೊಬ್ಬೆಯೊಡೆಯುತ್ತಿದ್ದರು. ಆದರೆ ನಾವು ಕೊಟ್ಟ ಮಾತು ಉಳಿಸಿಕೊಂಡು ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು.
ಮಹದೇವಪ್ರಸಾದ್ ನನ್ನ ಆತ್ಮೀಯ ಸ್ನೇಹಿತರಾಗಿದ್ದು, ತಾಳ್ಮೆಯಿಂದ ಜನರ ಜೊತೆ ಬೆರೆತು ಐದು ಬಾರಿ ಗೆದ್ದು ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಮಹದೇವಪ್ರಸಾದ್ ಒಡನಾಡಗಳು ಇಂದು ಗಣೇಶಪ್ರಸಾದ್ ಪರ ಹೋರಾಟ ಮಾಡಿ ಪಕ್ಷ ಕಟ್ಟಿ ಬೆಳೆಸಿ ಅಭೂತಪೂರ್ವ ಗೆಲುವು ತಂದು ಕೊಟ್ಟಿದ್ದೀರಿ. ಈ ಮೂಲಕ ಗಣೇಶಪ್ರಸಾದ್ ಇನ್ನೂ ಹಲವು ಬಾರಿ ಗೆಲ್ಲಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಎಚ್.ಎಂ.ಗಣೇಶಪ್ರಸಾದ್ ತಂದೆ ಮೀರಿಸಿದ ಮಗ. ಮಹದೇವಪ್ರಸಾದ್ 24 ಸಾವಿರ ಮತಗಳ ಅಂತರದಿಂದ ಗೆದ್ದರೆ, ಗಣೇಶಪ್ರಸಾದ್ 36 ಸಾವಿರ ಮತಗಳ ಅಂತರದಿಂದ ಗೆದ್ದು ದಾಖಲೆ ಮಾಡಿದ್ದಾರೆ. ಅಂತೆಯೇ ರಾಜ್ಯದ ಜನರು 135 ಮಂದಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಅಧಿಕಾರ ಮಾಡಲು ಅವಕಾಶ ನೀಡಿದ್ದಾರೆ. ಇದಕ್ಕೆ ಪ್ರತಿಯೊಬ್ಬರ ಬೆಂಬಲ ಕಾರಣ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಕೇಂದ್ರ ಸರ್ಕಾರದ ನಾಯಕರು ರಾಜ್ಯದಲ್ಲಿ ಸುತ್ತಾಡಿ ಕಾಂಗ್ರೆಸ್ ಸೋಲಿಸಬೇಕೆಂದು ತಂತ್ರ, ಕುತಂತ್ರ ಮಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷವನ್ನು ಜನ ಬೆಂಬಲಿಸಿದರು. 2023ರ ಚುನಾವಣೆ ಸಿದ್ದರಾಮಯ್ಯ ಮೋದಿ ನಡುವಿನ ಹೋರಾಟ ಎಂದು ಬಿಂಬಿಸುತ್ತಿದ್ದರು. ಕೊನೆಗೆ ಮೋದಿ ಸೋತರು ಸಿದ್ದರಾಮಯ್ಯ ಗೆದ್ದು ಬೀಗಿದರು. ಜನರ ಬಯಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದಿತ್ತು. ಜೊತೆಗೆ ಸಿದ್ದರಾಮಯ್ಯ ಐದು ವರ್ಷದ ಅವಧಿಯಲ್ಲಿ ಕೊಟ್ಟ ಆಡಳಿತ ಜನರ ಮನಸ್ಸಿನಲ್ಲಿತ್ತು. ಆ ಬಯಕೆ ಈಗ ಈಡೇರಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು.
ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ ಎಂದು ಬಿಜೆಪಿಯವರು ಭಾಷಣ ಮಾಡಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎನ್ನುತ್ತಿದ್ದರು. ಯಾವುದನ್ನು ಮಾಡಿಲ್ಲ. ಹೀಗಿರುವಾಗ ಬಿಜೆಪಿ ಕಾರ್ಯಕರ್ತರು ನಮ್ಮನ್ನು ಜಾರಿ ಮಾಡಿ ಎನ್ನುತ್ತಿದ್ದಾರೆ. ಆದರೂ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಬಡವರು, ರೈತರು, ಜನ ಸಾಮಾನ್ಯರ ಪರ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಎಲ್ಲಾ ಯೋಜನೆಗಳನ್ನು ಹಂತ ಹಂತವಾಗಿ ಜಾರಿ ಮಾಡುತ್ತದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷವೂ ದೇಶ ಹಾಗು ರಾಜ್ಯದಲ್ಲಿ ತಲೆ ಎತ್ತಲು ಬಿಡಬಾರದು. ಜಿಪಂ, ತಾಪಂ ಎಲ್ಲಾ ಚುನಾವಣೆಯಲ್ಲಿ ಗೆದ್ದು ಮುಂದಿನ ದಿನಗಳಲ್ಲಿ ನಿರಂತರವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಕಳೆದ ಐದು ವರ್ಷದ ಹಿಂದೆ ಚುನಾವಣೆಯಲ್ಲಿ ಸೋತರು ಕ್ಷೇತ್ರದ ಜನರು ಉತ್ತಮ ಬೆಂಬಲ ನೀಡಿದ್ದೀರಿ. ಬಿಜೆಪಿ ಸುಳ್ಳು ಹೇಳುವ ಪಕ್ಷವಾಗಿದ್ದು, ಅದರಂತೆ ಸ್ಥಳೀಯ ಶಾಸಕ ನಿರಂಜನಕುಮಾರ್ ಇದ್ದರು. ಕ್ಷೇತ್ರವು ನಜೀರ್ ಸಾಬ್, ಕೆ.ಎಸ್.ನಾಗರತ್ನಮ್ಮ, ಶಿವರುದ್ರಪ್ಪ, ಮಹದೇವಪ್ರಸಾದ್ ಅವರಂತ ಮಹಾನ್ ವ್ಯಕ್ತಿಗಳನ್ನು ಕೊಟ್ಟಿದೆ. ಇಲ್ಲಿನ ಜನರು ಪ್ರಭುದ್ದರು. ಸತ್ಯ ಅರಿತು ಮತ ಹಾಕಿದ್ದೀರಿ. ಯಾರ ಟೀಕೆಗೆ ಒಳಗಾಗದೆ ನನ್ನನ್ನು ಗೆಲ್ಲಿಸಿದ್ದೀರಿ. ಪ್ರತಿ ಗ್ರಾಮಕ್ಕೂ ಹೋದ ಸಂದರ್ಭದಲ್ಲಿ ವಿಜಯ ಯಾತ್ರೆಯಂತೆ ಜನರು ಸೇರುತ್ತಿದ್ದರು. ಆ ಕಾರಣದಿಂದಲೇ 36 ಸಾವಿರ ಅಂತರದಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ಮಾಡಿದ ಕೆಲಸಗಳು ನಮ್ಮ ಕೈ ಹಿಡಿದಿದೆ. ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷವಾಗಿದ್ದು, ಚುನಾವಣೆಗು ಮುನ್ನ ಕೊಟ್ಟ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಡೇರಿಸಿದ್ದಾರೆ. ಅದರಂತೆ ಎಲ್ಲಾ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಸದೃಢವಾಗಿದೆ ಎಂಬುದನ್ನು ವಿರೋಧಿಗಳಿಗೆ ತೋರಿಸಿದೆ ಎಂದರು.
ವಿರೋಧ ಪಕ್ಷದವರ ವೈಯಕ್ತಿಕ ಟೀಕೆ ಮಾಡುತ್ತಿದ್ದರು. ಆದರೆ ನಾನು ನಂಬಿರುವ ಜನ ನನ್ನ ಕೈಹಿಡಿದಿದ್ದಾರೆ. ಈ ಮೂಲಕ ಟೀಕೆಗೆ ಜನರೇ ಉತ್ತರ ಕೊಟ್ಟಿದ್ದಾರೆ. ಹಿರಿಯರು, ಯುವಕರು ಎಲ್ಲರ ಒಗ್ಗಟ್ಟಿನಿಂದ ಚುನಾವಣೆ ಗೆದ್ದಿದ್ದೇವೆ. ನಾನು ಶಾಸಕ ಅಲ್ಲ. ನಿಮ್ಮ ಮನೆ ಮಗನಾಗಿ ಇರುತ್ತೇನೆ. ನಿಮ್ಮ ಯಾವುದೇ ಕೆಲಸ ಮಾಡಲು ಸಿದ್ಧ. ಜನರನ್ನು ಅಲೆದಾಡಿಸಿ ಕಣ್ಣೊರೆಸಲು ಜನಸಂಪರ್ಕ ಸಭೆ ಮಾಡುವುದಿಲ್ಲ. ನಿಮ್ಮ ಗ್ರಾಮಕ್ಕೆ ಬಂದು ಸಭೆ ಮಾಡಿ ಅಹವಾಲು ಸ್ವೀಕರಿಸುತ್ತೇನೆ. ಯಾರು ಧ್ರುತಿ ಗೆಡಬೇಡಿ. ನಮ್ಮ ಟ್ರಸ್ಟ್ ಮೂಲಕ ಸಹಾಯ ಮಾಡುತ್ತೇವೆ. ಈ ಮೂಲಕ ನಿಮ್ಮ ಮನೆಯ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಅಭಯ ನೀಡಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಜೊತೆಗೆ ಸಣ್ಣಪುಟ್ಟ ಸಮುದಾಯದವರು ಕೂಡ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿದ್ದು, ಅಧಿಕ ಮತ ನೀಡಿದ್ದಾರೆ. ಮಾಜಿ ಸಚಿವ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ಮಹದೇವಪ್ರಸಾದ್ ಹಾದಿಯಲ್ಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಾಗಿ ಹಿರಿಯರ ಸಹಕಾರದಿಂದ ಹೆಚ್ಚು ಅನುದಾನ ತಂದು ಗುಂಡ್ಲುಪೇಟೆ ತಾಲೂಕನ್ನು ಅಭಿವೃದ್ಧಿ ಪಡಿಸಲಿ ಎಂದು ಆಶಿಸಿದರು.
ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಮಹದೇವಪ್ರಸಾದ್ ಸಿದ್ದರಾಮಯ್ಯ ಆಪ್ತರಾಗಿದ್ದು, ಕಾಂಗ್ರೆಸ್ ಪಕ್ಷದ ಜಿಲ್ಲೆಯ ಟ್ರಬಲ್ ಶೂಟರ್ ಆಗಿದ್ದರು. ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಅವರ ನಿಧನದ ನಂತರ ಬಡವಾಯಿತು. ಆದರೆ ಗೀತಾ ಮಹದೇವಪ್ರಸಾದ್ ಉಪಚುನಾವಣೆಯಲ್ಲಿ ಗೆದ್ದು ನಂತರ 2018ರಲ್ಲಿ ಸೋಲಾಯಿತು. ತದ ನಂತರ ಅಧಿಕಾರ ಇಲ್ಲದಿದ್ದರೂ ಎಲ್ಲರ ನಿರೀಕ್ಷೆ ಮೀರಿ ಶಾಸಕರಿಗಿಂತ ಹೆಚ್ಚಾಗಿ ಗಣೇಶಪ್ರಸಾದ್ ಎಲ್ಲರ ವಿಶ್ವಾಸಗಳಿಸಿ ಪಕ್ಷ ಬಲವರ್ಧನೆ ಮಾಡಿ, ತಂದೆಗಿಂತ ಹೆಚ್ಚು ಮತಗಳ ಅಂತರದಿಂದ ಗೆದ್ದರು ಎಂದು ಸಂತಸದ ಮಾತುಗಳನ್ನಾಡಿದರು.
2023ರ ಚುನಾವಣೆ ಕೋಮುವಾದ, ಜ್ಯಾತ್ಯಾತೀತ ನಡುವಿನ ಸಿದ್ದಾಂತಗಳ ನಡುವಿನ ಹೋರಾಟವಾಗಿತ್ತು. ಬಿಜೆಪಿಯವರು ಭಾವನಾತ್ಮಕ ವಿಷಯಗಳನ್ನು ಎತ್ತಿಕೊಂಡು ಜನರನ್ನು ಕೆರಳಿಸುತ್ತಿದ್ದರು. ಇದನ್ನರಿತ ಜನರು ಕಾಂಗ್ರೆಸ್ ಬಹುಮತದಿಂದ ಗೆಲ್ಲಿಸುವ ಮೂಲಕ ಪ್ರಭುದ್ಧತೆ ತೋರಿಸಿದ್ದಾರೆ. ಗೆಲುವಿನ ನಂತರ ನಮಗೆ ಜವಾಬ್ದಾರಿ ಹೆಚ್ಚಿದೆ. ಬಿಜೆಪಿಯವರು 600 ಭರವಸೆಕೊಟ್ಟರು ಈಡೇರಿಸಿಲ್ಲ. ಆದರೆ ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕಾರ್ಯಕರ್ತರು ಗ್ಯಾರಂಟಿ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಮಾತನಾಡಿ, ನನ್ನ ಚಿನ್ನದಂತ ಪುತ್ರನನ್ನು ನಿಮ್ಮ ಮಡಿಲಿಗೆ ಹಾಕಿ ಅಂದು ಮತಭೀಕ್ಷೆ ಬೇಡಿದ್ದೆ. ಅದರಂತೆ ನೀವು 36.670 ಸಾವಿರ ಮತಗಳ ಅಂತರದಿಂದ ಗಣೇಶಪ್ರಸಾದ್ ಗೆಲಿಸಿದ್ದೀರಿ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದ ಹಿನ್ನೆಲೆ ಬಹುತಮದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ಐದು ವರ್ಷದ ಹಿಂದೆ ಇದ್ದ ಅಧಿಕಾರವನ್ನು ಈಗ ಮತ್ತೆ ಪಡೆದು ಐದು ಗ್ಯಾರಂಟಿ ಈಡೇರಿಸುತ್ತಿದೆ. ಇದಕ್ಕೆ ಎಲ್ಲರು ತಾಳ್ಮೆಯಿಂದ ಇರಬೇಕು. ಐದು ವರ್ಷದಿಂದ ಆಗದ ಕೆಲಸವನ್ನು ನಮ್ಮ ಅವಧಿಯಲ್ಲಿ ಮಾಡಬೇಕಾಗಿದೆ. ನಿಮ್ಮ ಸಮಸ್ಯೆಗಳಿಗೆ ಗಣೇಶಪ್ರಸಾದ್ ಸ್ಪಂದಿಸಿ ಮಹದೇವಪ್ರಸಾದ್ ಹಾದಿಯಲ್ಲಿ ಸಾಗಿ ತಂದೆಗೆ ತಕ್ಕ ಮಗನಾಗಿರುತ್ತಾನೆ. ಗಣೇಶಪ್ರಸಾದ್ ಹತ್ತಿರ ಕ್ಷೇತ್ರದ ಜನರು ದಬಾಯಿಸಿ ಕೆಲಸ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಕೆ.ಆರ್.ನಗರ ಶಾಸಕ ರವಿಶಂಕರ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮಾಜಿ ಶಾಸಕ ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಮಾಜಿ ಸಂಸದ ಎ.ಸಿದ್ದರಾಜು, ಶಿವಣ್ಣ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ನಾಜಿ ಮುದ್ದಿನ್ ಮಾತನಾಡಿದರು
ಮಾಜಿ ಶಾಸಕ ಜಯಣ್ಣ, ಜಿಪಂ ಮಾಜಿ ಸದಸ್ಯರಾದ ಕೆ.ಎಸ್.ಮಹೇಶ್, ಬೊಮ್ಮಯ್ಯ, ಚೆನ್ನಪ್ಪ, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಚಾಮುಲ್ ಮಾಜಿ ಅಧ್ಯಕ್ಷ ನಂಜುಂಡಪ್ರಸಾದ್, ಪುರಸಭೆ ಸದಸ್ಯ ಮಹಮ್ಮದ್ ಇಲಿಯಾಸ್, ರಮೇಶ್, ಮಧುಸೂಧನ್, ಎಪಿಎಂಸಿ ಸದಸ್ಯ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಗೋಪಾಲಪುರ ಲೋಕೇಶ್, ಮಡಹಳ್ಳಿ ಮಣಿಕಂಠ, ಸಾಹುಲ್ ಹಮಿದ್, ಶಿವಪುರ ಮಂಜಪ್ಪ, ದೇವರಹಳ್ಳಿ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು