ಮೈಸೂರು: ಕಾಂಗ್ರೆಸ್-ಬಿಜೆಪಿಯ ಅತಿರಥ, ಮಹಾರಥ ನಾಯಕರೆಲ್ಲ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಮೂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮೇಲಿನ ಎಲ್ಲ ಆರೋಪಗಳ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.
ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ-ಡಿಕೆಶಿ ಏನಾದರೂ ಮಾತನಾಡಿದರೆ ಅರ್ಕಾವತಿ ಹಗರಣ, ರೀಡೂ, ಡಿನೋಟಿಫಿಕೇಶನ್ ಎಂದು ಹೆದರಿಸಿದ್ದೇ ಆಯಿತು. ಒಂದು ದಿನವಾದರೂ ಕೆಂಪಣ್ಣ ಆಯೋಗದ ವರದಿ, ಅರ್ಕಾವತಿ ಹಗರಣದ ತನಿಖೆ ಮಾಡಲಿಲ್ಲ. ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಬಿಟ್ ಕಾಯಿನ್, ಶೇ.೪೦ ಕಮಿಷನ್, ಪಿಎಸ್‌ಐ ಹಗರಣ ಎಂದು ದೂರಿತು. ಈಗ ಅವರದ್ದೇ ಸರ್ಕಾರ ಇದೆ. ಈ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡಿದರೆ ಸಿದ್ದರಾಮಯ್ಯ ಅವರ ಪಾದಪೂಜೆ ಮಾಡುತ್ತೇನೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ೨೦ ಸ್ಥಾನ ಗೆಲ್ಲುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಮ್ಮ ಮುಖ ನೋಡಿ ಯಾರೂ ಮತ ಹಾಕಿಲ್ಲ. ಗ್ಯಾರಂಟಿ ಯೋಜನೆಗಳನ್ನು ನೋಡಿ ಬೆಂಬಲಿಸಿದ್ದಾರೆ. ಮೋದಿ ಬಗ್ಗೆ ಮಾತನಾಡುವುದನ್ನು ಬಿಡಿ. ನೀವು ಮುಖ್ಯಮಂತ್ರಿ ಆಗಿದ್ದಾಗ, ಜೆಡಿಎಸ್ ಜತೆಗೆ ಕೈ ಜೋಡಿಸಿದ್ದಾಗಲೂ ಜನ ನನ್ನನ್ನು ಇಲ್ಲಿಂದ ಗೆಲ್ಲಿಸಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರೇ ಹೇಳುವಂತೆ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ೫೯ ಸಾವಿರ ಕೋಟಿಯಂತೆ ಐದು ವರ್ಷಕ್ಕೆ ೩ ಲಕ್ಷ ಕೋಟಿ ಬೇಕು. ೧೩ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಈ ಹಣವನ್ನು ಹೊಂದಿಸುವ ಮಾರ್ಗವೇ ತಿಳಿಯುತ್ತಿಲ್ಲ. ಯಾವ ಆದಾಯದ ಮೂಲಗಳಿಂದ ಈ ಹಣ ಸಂಗ್ರಹಿಸಲಾಗುತ್ತದೆ ಎಂಬುದನ್ನು ಅವರು ಬಹಿರಂಗಪಡಿಸಲಿ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ಮುಖ್ಯಮಂತ್ರಿಗಳು ಮಾಡಿದ ಸಾಲದ ಪ್ರಮಾಣದ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಅಧಿಕಾರಕ್ಕೆ ಬಂದ ಕೂಡಲೇ ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುತ್ತೇವೆ. ಪಠ್ಯಪುಸ್ತಕ ಬದಲಾವಣೆ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಸರ್ಕಾರ, ವಿದ್ಯುತ್ ಶುಲ್ಕ ಹೆಚ್ಚಳವನ್ನು ಮಾತ್ರ ಏಕೆ ಹಿಂಪಡೆಯುವುದಿಲ್ಲ ಎಂದು ಪ್ರತಾಪ ಸಿಂಹ ಪ್ರಶ್ನಿಸಿದರು.
ವಿದ್ಯುತ್ ದರ ಏರಿಸಿಲ್ಲ: ವಾಸ್ತವದಲ್ಲಿ ಬಿಜೆಪಿ ಸರ್ಕಾರ ವಿದ್ಯುತ್ ಶುಲ್ಕವನ್ನು ಏರಿಸಿಲ್ಲ. ಕೆಇಆರ್‌ಸಿ ಎನ್ನುವುದು ಸ್ವಾಯತ್ತ ಸಂಸ್ಥೆ. ಆ ಸಂಸ್ಥೆ ವಿದ್ಯುತ್ ಶುಲ್ಕವನ್ನು ಪರಿಷ್ಕರಿಸಿದ್ದು, ಅದನ್ನು ತಡೆಹಿಡಿಯುವ ಎಲ್ಲ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಗುತ್ತಿಗೆದಾರರಿಂದ ಕಮಿಷನ್ ಪಡೆಯುವ ಸಲುವಾಗಿಯೇ ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲ ಕಾಮಗಾರಿಗಳನ್ನು ತಡೆ ಹಿಡಿಯುತ್ತಿದೆ ಎಂದು ದೂರಿದರು.
ಡಯಾಲಿಸಿಸ್ ಸೆಂಟರ್ ಸ್ಥಾಪನೆ ಗುರಿ: ೮೯ ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಕೆ.ಆರ್ ಆಸ್ಪತ್ರೆ ನವೀಕರಣ ಕಾಮಗಾರಿಯನ್ನು ಸಂಸದ ಪ್ರತಾಪಸಿಂಹ ಮಂಗಳವಾರ ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೨೪ರ ಜುಲೈ ತಿಂಗಳಿಗೆ ಮೈಸೂರು ಮೆಡಿಕಲ್ ಕಾಲೇಜು ಸ್ಥಾಪನೆಯಾಗಿ ೧೦೦ ವರ್ಷ ತುಂಬುತ್ತದೆ. ಶತಮಾನೋತ್ಸವ ಸಂದರ್ಭದಲ್ಲಿ ಆಸ್ಪತ್ರೆ ಸಂಪೂರ್ಣವಾಗಿ ನವೀಕರಣಗೊಂಡು ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕೆಂಬುದು ನಮ್ಮ ಉದ್ದೇಶ. ಕೆಆರ್ ಆಸ್ಪತ್ರೆಯಲ್ಲಿ ನೂರು ಹಾಸಿಗೆಯ ಡಯಾಲಿಸಿಸ್ ಸೆಂಟರ್ ಮಾಡಬೇಕೆಂಬ ಗುರಿ ಇದೆ. ಇದು ನನ್ನ ವೈಯಕ್ತಿಕ ಆಸೆಯೂ ಹೌದು, ಅಗತ್ಯವೂ ಹೌದು. ಈ ಬಗ್ಗೆ ಮೊನ್ನೆ ನಡೆದ ದಿಶಾ ಕಮಿಟಿ ಸಭೆಯಲ್ಲೂ ಚರ್ಚಿಸಿದ್ದೇನೆ. ಒಂದು ಕಟ್ಟಡ ಗುರುತಿಸಿ ಅಲ್ಲಿ ಡಯಾಲಿಸಿಸ್ ಸೆಂಟರ್ ಮಾಡೇ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳು ಕಟ್ಟಡ ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.