ಗುಂಡ್ಲುಪೇಟೆ: ಕಾಡಾನೆಗಳ ಹಿಂಡು ದಾಳಿ ನಡೆಸಿ ಚೆಂಡು ಮಲ್ಲಿಗೆ ಫಸಲು ನಾಶ ಪಡಿಸಿರುವ ಘಟನೆ ತಾಲೂಕಿನ ಶ್ರೀಕಂಠಪುರ ಗ್ರಾಮದ ತಿಮ್ಮಯ್ಯನಕೆರೆ ಪಕ್ಕದಲ್ಲಿ ನಡೆದಿದೆ.
ಶ್ರೀಕಂಠಪುರ ಗ್ರಾಮದ ಚಿಕ್ಕೆಗೌಡ ಎಂಬ ರೈತ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಚೆಂಡು ಮಲ್ಲಿಗೆ ಫಸಲಿನ ಮೇಲೆ ನಾಲ್ಕು ಕಾಡಾನೆಗಳ ಗುಂಪು ಲಗ್ಗೆಯಿಟ್ಟು, ಬೆಳೆಯನ್ನು ತುಳಿದು ಹಾಕಿದೆ. ಇದರಿಂದ ರೈತನ ಬೆಳೆ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಹೂವು ಬಿಡುವ ಹಂತದಲ್ಲಿದ್ದ ಫಸಲಿನ ಮೇಲೆ ಕಾಡಾನೆಗಳು ದಾಳಿ ಮಾಡಿರುವ ಹಿನ್ನೆಲೆ ರೈತ ನಷ್ಟ ಸುಳಿಗೆ ಸಿಲುಕುವಂತಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಈ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ರೀತಿಯಲ್ಲಿ ಪರಿಹಾರ ದೊರಕಿಸಿಕೊಡುವಂತೆ ಮಾಲೀಕರಾದ ಚಿಕ್ಕೆಗೌಡ ಒತ್ತಾಯಿಸಿದ್ದಾರೆ.