Sunday, April 20, 2025
Google search engine

Homeಸ್ಥಳೀಯಕಾರ್ಮಿಕರಿಗೆ ಪಿಂಚಣಿ ನೀಡಲು ಮೀನಮೇಷ

ಕಾರ್ಮಿಕರಿಗೆ ಪಿಂಚಣಿ ನೀಡಲು ಮೀನಮೇಷ

ಮೈಸೂರು: ದೇಶದಲ್ಲಿ ಅಸಂಘಟಿತ ವಲಯದ ೧೦ ಕೋಟಿಗೂ ಅಧಿಕ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ನೀಡಲು ಸರ್ಕಾರಗಳು ಮೀನಮೇಷ ಎಣಿಸುತ್ತಿದ್ದು, ಈ ಕುರಿತು ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಸಿಐಟಿಯು ಜಿಲ್ಲಾ ಸಮಿತಿಯ ಅಧ್ಯಕ್ಷ ಸಿ.ಜಯರಾಮು ಹೇಳಿದರು.

ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಪಿಂಚಣಿದಾರ ಸಂಘಟನೆಗಳ ಸಮನ್ವಯ ಸಮಿತಿ ಶನಿವಾರ ಆಯೋಜಿಸಿದ್ದ ಎಲ್ಲರಿಗೂ ಪಿಂಚಣಿ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದ ಮೊದಲ ನೂರು ಸಿರಿವಂತರ ಒಟ್ಟು ಆಸ್ತಿ ೫೪.೧೨ ಲಕ್ಷ ಕೋಟಿ ಇದೆ. ಆದರೆ, ದೇಶದಲ್ಲಿನ ೧೪ ಕೋಟಿ ಕಾರ್ಮಿಕರ ಪೈಕಿ ೧೦ ಕೋಟಿ ಜನರಿಗೆ ಪಿಂಚಣಿ ವ್ಯವಸ್ಥೆಯೇ ಇಲ್ಲ. ಸರ್ಕಾರ ಕನಿಷ್ಠ ೧ ಸಾವಿರ ಪಿಂಚಣಿ ಘೋಷಿಸಿದ್ದು, ೨೦೧೪ರಿಂದ ಈವರೆಗೆ ಅದರ ಪರಿಷ್ಕರಣೆ ಆಗಿಲ್ಲ. ಈ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ೩ ಸಾವಿರ ಪಿಂಚಣಿ ಕೇಳುತ್ತಿದ್ದು, ಅದಕ್ಕೆ ವರ್ಷಕ್ಕೆ ಸರ್ಕಾರಕ್ಕೆ ೩ ಲಕ್ಷ ಕೋಟಿ ಸಾಕು. ಆದರೂ ಸರ್ಕಾರಗಳು ಕಾರ್ಮಿಕರ ಮನವಿಗೆ ಸ್ಪಂದಿಸದೇ ಧಿಮಾಕು ತೋರುತ್ತಿವೆ ಎಂದು ಟೀಕಿಸಿದರು.

ದೇಶದ ಜನರ ಮೇಲೆ ಪ್ರತ್ಯಕ್ಷ ತೆರಿಗೆ ಜತೆಗೆ ಪರೋಕ್ಷ ತೆರಿಗೆ ಭಾರ ಹೆಚ್ಚುತ್ತಲೇ ಇದೆ. ನಾವು ಬಳಸುವ ಪ್ರತಿ ಉತ್ಪನ್ನಕ್ಕೂ ಜಿಎಸ್‌ಟಿ ಇದ್ದು, ಅದರಿಂದಲೇ ವರ್ಷಕ್ಕೆ ೨೦ ಲಕ್ಷ ಕೋಟಿ ಸಂಗ್ರಹ ಆಗುತ್ತಿದೆ ಎಂದು ವಿವರಿಸಿದರು.
ಕಾರ್ಮಿಕ ಮುಖಂಡ ಶ್ರೀಧರ್ ಮಾತನಾಡಿ, ಎನ್‌ಪಿಎಸ್ ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ಆದರೆ, ಕಾರ್ಮಿಕ ಒಕ್ಕೂಟಗಳ ಹೋರಾಟ ಹತ್ತಿಕ್ಕಲು ಆಗಿಲ್ಲ. ಇಂತಹ ಹೋರಾಟಗಳು ಹೆಚ್ಚು ನಡೆಯಬೇಕು ಎಂದರು. ಮುಖಂಡ ರವಿ ಮಾತನಾಡಿ, ದೇಶದ ಆರ್ಥಿಕತೆ ಬೆಳೆದಿರುವುದೇ ಕಾರ್ಮಿಕರಿಂದ. ಅವರಿಗೆ ಪಿಂಚಣಿ ಕೊಡುವುದಿಲ್ಲ ಎಂದರೆ ಈ ಸರ್ಕಾರವನ್ನು ನಾವು ಏಕೆ ಆರಿಸಬೇಕು ಎಂದು ಕೇಳಿದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮಾಕಾಂತ್ ಅಧ್ಯಕ್ಷತೆ ವಹಿಸಿದ್ದರು. ಎನ್.ಕೆ.ಬಾಲಾಜಿ ರಾವ್ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಪಿಂಚಣಿದಾರ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಸಿ.ಆರ್. ಕೃಷ್ಣಮೂರ್ತಿ, ಮುಖಂಡರಾದ ಪ್ರಕಾಶ, ನಿಂಗೇಗೌಡ, ಪರಮೇಶ್ವರ್ ಇದ್ದರು

RELATED ARTICLES
- Advertisment -
Google search engine

Most Popular