ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ನಗರದ ಹೃದಯ ಭಾಗದಲ್ಲಿರುವ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವುಳ್ಳ ಮೈಸೂರಿಗರ ಹೆಮ್ಮೆಯ ಶ್ರೀ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವ ಕೆಲಸ ತ್ವರಿತವಾಗಿ ಆಗಬೇಕಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಅಗ್ರಹಾರದ ಬಿ.ಬಿ.ಗಾರ್ಡನ್‌ನಲ್ಲಿರುವ ಶ್ರೀ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವರ್ಧಂತೋತ್ಸವದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಾರಿತ್ರಿಕ ಮಹತ್ವದ ಈ ಶಾಲೆ ಒಂದು ರೀತಿ ನಮ್ಮ ಮೈಸೂರು ಸಂಸ್ಥಾನದ ಅಸ್ಮಿತೆಯಾಗಿದ್ದು ಇದರ ಉಳಿವಿನ ಹೊಣೆ ಮೈಸೂರಿಗರದ್ದೆಂದರು.
ಶಿಕ್ಷಣದ ಮಹತ್ವ ಅರಿತಿದ್ದ ದೂರದೃಷ್ಟಿಯುಳ್ಳ ಮಹಾರಾಜರು ತಮ್ಮ ಆಳ್ವಿಕೆಯಲ್ಲಿ ಅವತ್ತಿನ ಕಾಲದಲ್ಲೇ ಅಂದರೆ ಶತಮಾನದ ಹಿಂದೆಯೇ ತನ್ನ ಪ್ರಜೆಗಳು ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾಳಜಿಯಿಂದ ಅನೇಕ ಶಾಲೆಗಳನ್ನು ವ್ಯವಸ್ಥಿತವಾಗಿ ತೆರೆದಿದ್ದರು. ಅಂತಹ ಶಾಲೆಗಳಲ್ಲೊಂದು ಶ್ರೀ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇವತ್ತಿಗೂ ಈ ಶಾಲೆ ಕಟ್ಟಡ, ಕೊಠಡಿಯ ತರಗತಿಗಳು ಸೇರಿದಂತೆ ಎಲ್ಲಾ ರೀತಿಯಿಂದಲೂ ಸುವ್ಯವಸ್ಥಿತವಾಗಿಯೇ ಇದೆ. ಆದರೂ ನಮ್ಮ ಜನರಲ್ಲಿರುವ ಖಾಸಗಿ ಶಾಲೆಗಳ ಭ್ರಮೆ ಮತ್ತು ಇಂಥ ಸಮೂಹ ಸನ್ನಿಯಿಂದಾಗಿ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಇದು ಹೀಗೆಯೇ ಮುಂದುವರೆದರೆ ಮಕ್ಕಳೇ ಇಲ್ಲದೆ ಈ ಶಾಲೆ ಮುಚ್ಚಿಹೋಗುವ ಹಂತ ತಲುಪಿದೆ. ಹಾಗಾಗಿ ಈ ಶಾಲೆಯಲ್ಲಿ ಕಲಿತಿರುವ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ಇಲ್ಲಿ ಕಲಿಯುತ್ತಿರುವವರು, ಪೋಷಕರು, ಸುತ್ತಮುತ್ತಲಿನ ಬಡಾವಣೆಯ ಜನರು ಸ್ವಯಂ ಜಾಗೃತಿಗೊಂಡು ಇಲ್ಲಿಗೆ ಸಾಕಷ್ಟು ಮಕ್ಕಳು ಬರುವಂತೆ ಮನವೊಲಿಸುವ ಕೆಲಸ ಮಾಡಿ ಶಾಲೆಯ ಉಳಿವಿಗೆ ನೆರವಾಗಬೇಕಾಗಿದೆ. ಇಂದು ನಮ್ಮ ಸರ್ಕಾರಗಳು ಎಲ್ಲಾ ರೀತಿಯ ಸವಲತ್ತುಗಳನ್ನೂ ಕೊಟ್ಟರೂಕೂಡ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿಗೆ ಬರುವುದಕ್ಕೆ ನಮ್ಮ ಜನರ ಮನಸ್ಥಿತಿಯೇ ಬಹು ಮುಖ್ಯ ಕಾರಣವಾಗಿದ್ದು ಇದು ಬದಲಾಗಬೇಕಾಗಿದೆ. ಇಲ್ಲದಿದ್ದರೆ ಇಷ್ಟರಲ್ಲೇ ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ಮುಚ್ಚಿ ಹೋಗುವ ಬಹುದೊಡ್ದ ಅಪಾಯವಿದೆಯೆಂದು ಹೇಳಿದರು.
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸೌಜನ್ಯ, ಸೈಯದ್ ಅಖಿಲ್ , ಹೇಮಂತ್ ಹಾಗೂ ಐಶ್ವರ್ಯ ಅವರುಗಳಿಗೆ ಬಹುಮಾನ ವಿತರಿಸಿದರು. ಹಾಗೆಯೇ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಮೈಸೂರು ಜಿಲ್ಲೆಯ ಅಧ್ಯಕ್ಷರೂ ಆದ ವಿಶ್ರಾಂತ ಶಿಕ್ಷಕ ಎಚ್.ವಿ.ಮುರಳೀಧರ್ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಸಾಮಾನ್ಯ ಜ್ಞಾನ ಹೆಚ್ಚಿಸುವಂತಹ ವಿವಿಧ ಕಥಾ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಎನ್.ಆರ್.ಸುಮಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಕೆ.ಲಕ್ಷ್ಮಿ ಮತ್ತು ಬಿ.ಎಸ್ ರೂಪಾ ಹಾಗೂ ಅನುಭವ ಟುಟೋರಿಯಲ್ಸ್‌ನ ಶಿಕ್ಷಕ ವಿ.ನಾರಾಯಣರಾವ್ ಮುಂತಾದವರು ಉಪಸ್ಥಿತರಿದ್ದರು.