ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಸಹಿಸಲಾಗದ ಕೇಂದ್ರ ಬಿಜೆಪಿ ಸರ್ಕಾರ ಅನ್ನಭಾಗ್ಯ ಯೋಜನೆಗೆ ಬರಬೇಕಾದ ಅಕ್ಕಿಯನ್ನು ತಡೆಹಿಡಿಯುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಶಾಸಕ ಕೆ.ಹರೀಶ್‌ಗೌಡ ಅಸಮಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರಗೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಿಂದ ತೊಲಗುವತನಕ ದೇಶದ ಬಡ ಜನರಿಗೆ ನ್ಯಾಯ ಸಿಗುವುದಿಲ್ಲ. ಪ್ರಜೆಗಳಿಗೆ ಅಗತ್ಯವಿರುವುದನ್ನು ಪೂರೈಸುವುದು ಪ್ರಜಾಪ್ರಬುತ್ವದಲ್ಲಿ ಆಡಳಿತ ಸರ್ಕಾರದ ಜವಾಬ್ದಾರಿ. ಇಡಿ ದೇಶದಲ್ಲಿ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ಈಡೇಸುತ್ತಿರುವ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಕಂಡು ಬಿಜೆಪಿಗೆ ಭಯ ಶುರುವಾಗಿದೆ. ದೇಶದ ಬಡ ಜನರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಕೇವಲ ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಾ ದೇಶವನ್ನು ಮಾರಾಟ ಮಾಡಲು ಮುಂದಾಗಿದೆ. ಅದರಂತೆ ಬಿಎಸ್‌ಎನ್‌ಎಲ್, ಎಲ್‌ಐಸಿಯಂತಹ ಸಂಸ್ಥೆಗಳನ್ನು ಖಾಸಗಿಯವರಿಗೆ ಕೊಡಲು ಸಿದ್ಧವಾಗಿದೆ ಎಂದು ಟೀಕಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವ ನಗರ ಪಾಲಿಕೆಯ ಪೇ ಆಂಡ್ ಪಾರ್ಕಿಂಗ್ ನಿಯಮವನ್ನು ನಾನು ವಿರೋಧಿಸುತ್ತೇನೆ. ದಿನನಿತ್ಯ ಸಾವಿರಾರು ಜನರು ತಮ್ಮ ಕೆಲಸಗಳಿಗಾಗಿ ನಗರಕ್ಕೆ ಆಗಮಿಸುತ್ತಾರೆ. ಆದ್ದರಿಂದ ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಪಾರ್ಕಿಂಗ್ ಶುಲ್ಕ ಪಡೆಯಬಾರದು. ಈ ವಿಚಾರವಾಗಿ ಪಾಲಿಕೆಗೆ ಪತ್ರ ಬರೆಯುತ್ತೇನೆ. ಅರಸು ರಸ್ತೆಯಲ್ಲಿನ ವರ್ತಕರಿಗೆ ಬೇಕಿದ್ದರೆ ಈ ನಿಮಯ ಜಾರಿಗೊಳಿಸಲಿ. ಆದರೆ, ಅನಗತ್ಯವಾಗಿ ಎಲ್ಲೆಂದರಲ್ಲಿ ಈ ನಿಯಮ ಜಾರಿ ಮಾಡುವುದು ಬೇಡ ಎಂದು ಹೇಳಿದರು.
ಈ ಹಿಂದೆ ಮಳೆಯಿಂದಾಗಿ ಮಹಾರಾಣಿ ಕಾಲೇಜಿನ ಕಟ್ಟಡದ ಭಾಗವೊಂದು ಕುಸಿದಿರುವುದು ನನ್ನ ಗಮನಕ್ಕೆ ಬಂದಿದ್ದು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಹೊದಗಿಸಲು ಸಂಬಂಧಪಟ್ಟವರ ಬಳಿ ಮಾತನಾಡಿ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.