ತುಮಕೂರು, ಜೂನ್ 7: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ತುಮಕೂರಿನಲ್ಲಿ ಖಾಸಗಿ ಬಸ್‌ಗಳ ಮಾಲೀಕರು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಬಸ್‌ಗಳು ಮಾರಾಟಕ್ಕಿವೆ ಎಂಬ ಭಿತ್ತಿಪತ್ರಗಳನ್ನು ಮಾಲೀಕರು ಬಸ್‌ಗಳ ಮೇಲೆ ಅಂಟಿಸಿ, ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಒತ್ತಾಯಿಸಿದರು. ತುಮಕೂರು ಜಿಲ್ಲೆಯೊಂದರಲ್ಲೇ 300 ಕ್ಕೂ ಹೆಚ್ಚು ಖಾಸಗಿ ಬಸ್ ಸೇವೆಗಳು ಜಿಲ್ಲಾ ಕೇಂದ್ರದಿಂದ ಕುಣಿಗಲ್, ಮಧುಗಿರಿ ಮತ್ತು ಪಾವಗಡ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುತ್ತವೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆಯಿಂದ ನಮಗೆ ಶೇ. 50ರಷ್ಟು ಆದಾಯ ಕಡಿಮೆಯಾಗಲಿದ್ದು, ವ್ಯಾಪಾರ ವಹಿವಾಟು ನಡೆಸುವುದು ಅಸಾಧ್ಯವಾಗಲಿದೆ. ಈಗ ನಮಗೆ ಎರಡು ಆಯ್ಕೆಗಳು ಮಾತ್ರ ಉಳಿದಿವೆ. ಕೆಎಸ್‌ಆರ್‌ಟಿಸಿಗೆ ಬಸ್ ಸಂಪರ್ಕ ನೀಡಲು ಸಾಧ್ಯವಾಗದ ಗ್ರಾಮೀಣ ಪ್ರದೇಶಗಳಿಗೆ ಸೇವೆ ನೀಡುವುದನ್ನು ನಿಲ್ಲಿಸುವುದು. ಮತ್ತೊಂದು ನಮ್ಮ ಬಸ್‌ಗಳನ್ನು ಮಾರಾಟ ಮಾಡುವುದು ಎಂದು ಜಿಲ್ಲಾ ಖಾಸಗಿ ಮಾಲೀಕರ ಸಂಘದ ಅಧ್ಯಕ್ಷ ಎಂಎಸ್ ಶಂಕರನಾರಾಯಣ ಹೇಳಿದರು.