ಗನ್ ಮ್ಯಾನ್ ಹೇಳಿಕೆಗೆ ಬಿಜೆಪಿ ಮುಖಂಡರ ಕಿಡಿ

0

ಗುಂಡ್ಲುಪೇಟೆ: ಪಟ್ಟಣದಲ್ಲಿ ಜೂ.6ರಂದು ನಡೆದ ಕಾಂಗ್ರೆಸ್ ಕೃತಜ್ಞತಾ ಸಭೆಯಲ್ಲಿ ಮಾಜಿ ಶಾಸಕ ನಿರಂಜನಕುಮಾರ್ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಸ್.ನಂಜಪ್ಪ ಹಗುರವಾಗಿ ಮಾತನಾಡಿ ಹಾಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್‍ಗೆ ನಿರಂಜನಕುಮಾರ್ ಗನ್ ಮ್ಯಾನ್ ಆಗಿ ಹೋಗಬೇಕು ಎನ್ನುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್ ಕಿಡಿಕಾರಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಎಚ್.ಎಸ್.ನಂಜಪ್ಪ ಕೂಡ ಎಚ್.ಎಸ್.ಮಹದೇವಪ್ರಸಾದ್ ವಿರುದ್ಧ ಎರಡು ಬಾರಿ ಸೋತಿದ್ದರು. ಆಗ ಅವರೂ ಕೂಡ ಗನ್ ಮ್ಯಾನ್ ಅಥವಾ ವಾಚ್ ಮ್ಯಾನ್ ಕೆಲಸ ಮಾಡಿದ್ದರಾ ಎಂಬುದನ್ನು ಜನರಿಗೆ ತಿಳಿಸಬೇಕು. ಗನ್ ಮ್ಯಾನ್ ಕೊಡಿ ಎಂದು ನಿಮ್ಮ ಬಳಿ ನಿರಂಜನಕುಮಾರ್‍ಗೆ ಅರ್ಜಿ ಹಾಕಲು ಹೋಗಿದ್ದರಾ. ನೀವು ಬೇಕಿದ್ದರೆ ಗಣೇಶಪ್ರಸಾದ್ ಹತ್ತಿರ ಗನ್ ಮ್ಯಾನ್ ಕೆಲಸ ಮಾಡಿ ಎಂದು ಪ್ರತ್ಯುತ್ತರ ನೀಡಿದರು.

ಅಧಿಕಾರದ ಅವಧಿಯಲ್ಲಿ ನಿರಂಜನಕುಮಾರ್ ಒಬ್ಬರ ಬಗ್ಗೆಯೂ ಟೀಕೆ ಮಾಡಿಲ್ಲ. ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಿ ಕೋಟಿಗಟ್ಟಲೆ ಅನುದಾನ ತಂದಿದ್ಧೇನೆ ಎಂದು ಹೇಳುತ್ತಿದ್ದರು. ಇಂತವರ ಬಗ್ಗೆ ಎಚ್.ಸ್.ನಂಜಪ್ಪ ಹಗುರವಾಗಿ ಮಾತನಾಡಬಾರದು. ಇದಕ್ಕೆ ನೂತನ ಶಾಸಕ ಗಣೇಶಪ್ರಸಾದ್ ಇಂತವರಿಗೆ ಕಡಿವಾಣ ಹಾಕಬೇಕು. ಜೊತೆಗೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಾವು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಎಪಿಎಂಸಿ ಅಧ್ಯಕ್ಷ ಕಮರಹಳ್ಳಿ ರವಿ ಮಾತನಾಡಿ, ರಾಜಕಾರಣದಲ್ಲಿ ಸೋಲು ಗೆಲುವು ಸಾಮಾನ್ಯ. ಹಾಗಂತ ಮಾಜಿ ಶಾಸಕ ನಿರಂಜನಕುಮಾರ್ ಬಗ್ಗೆ ಕೀಳಾಗಿ ಮಾತನಾಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋತಿದ್ದು ಇವರಿಗೆ ಅರಿವಿಲ್ಲವೇ. ಸೋತ ಮೇಲೆ ಯಾರಿಗೆ ಗನ್ ಮ್ಯಾನ್ ಆಗಿದ್ದರು ಎಂಬುದನ್ನು ಅವರೇ ತಿಳಿಸಿಕೊಡಲಿ ಎಂದು ಪ್ರಶ್ನಿಸಿ, ರಾಜ್ಯದ ಘಟಾನುಘಟಿ ನಾಯಕರಾದ ಜೆ.ಎಚ್.ಪಟೇಲ್, ಯಡಿಯೂರಪ್ಪ ಸೋತಿದ್ದಾರೆ. ನಂಜಪ್ಪನವರಿಗೆ ಅರಿವಿರಬೇಕಿತ್ತು. ಹಾಲಿ ಶಾಸಕರನ್ನು ಮೆಚ್ಚಿಸಲು ಅಧಿಕಾರ ಮದದಿಂದ ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಕುಟುಕಿದರು.

ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ಮಾಜಿ ಸಚಿವ ವಿ.ಸೋಮಣ್ಣ ಅವರ ಜೊತೆ ಯಾರು ಗನ್ ಮ್ಯಾನ್ ರೀತಿ ಕೆಲಸ ಮಾಡಿದ್ದರುಎಂದು ಕ್ಷೇತ್ರದ ಜನತೆಗೆ ಗೊತ್ತಿದೆ. ನೀವು ಮೊದಲು ಬದ್ಧತೆಯಿಂದ ನಡೆದುಕೊಳ್ಳುವುದನ್ನು ಕಲಿಯಿರಿ. ಮಾಜಿ ಶಾಸಕ ನಿರಂಜನಕುಮಾರ್ ಯಾರಿಗೂ ಗನ್ ಮ್ಯಾನ್ ಆಗುವ ದಾರಿದ್ರ್ಯ ಬಂದಿಲ್ಲ. ಈ ರೀತಿಯಾಗಿ ಕೆಲಸ ಮಾಡಿ ನಿಮಗೆ ತುಂಬಾ ಅನುಭವವಿದೆ. ಸದ್ಯಕ್ಕೆ ನೀವು ಇರೋದು ಹಾಗೆ ಅನ್ನಿಸುತ್ತದೆ. ನಿರಂಜನ್ ಹಿಂದೆ 77 ಸಾವಿರ ಮತದಾರರಿದ್ದಾರೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಬಿಜೆಪಿ ಮುಖಂಡ ಅಗತಗೌಡನಹಳ್ಳಿ ಬಸವರಾಜು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಪ್ರಣಯ್, ಮಾಧ್ಯಮ ಸಂಚಾಲಕ ಶಿಂಡನಪುರ ಮಂಜುನಾಥ್, ತಾಪಂ ಮಾಜಿ ಸದಸ್ಯ ಮಹದೇವಪ್ರಸಾದ್, ಕಬ್ಬಹಳ್ಳಿ ರೇವಣ್ಣ, ಹಂಗಳ ಬಸವೇಶ್, ಪಿಎಲ್ಡಿ ಬ್ಯಾಂಕ್ ಚನ್ನಮಲ್ಲಿಪುರ ಬಸವಣ್ಣ, ಮಹೇಶ್ ಮಳವಳ್ಳಿ, ಮಹೇಶ್ ಕಿರಣ್, ಸುಬ್ಬು, ಗುರುಸ್ವಾಮಿ, ನಂಜುಂಡಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.