ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರದಿಂದ ಗಾಳಿಪಟಗಳು ಬಾನ ದಾರಿಯ ಗುಂಟ ಓಡಾಡುವುದನ್ನು ಕಾಣಬಹುದು.
ಈ ಗಾಳಿಪಟಗಳನ್ನು ಹಾರಿಸಲು ಮಾಂಜಾ ಹಚ್ಚಿದ ದಾರಗಳನ್ನು ಬಳಸಲಾಗುತ್ತದೆ. ಆದರೆ ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರಿಗೆ ಹಾನಿಕಾರಕವಾದ ಲೋಹ ಅಥವಾ ಗಾಜಿನ ಲೇಪಿತ ಮಾಂಜಾವನ್ನು ನಿಷೇಧಿಸಲು ಕರ್ನಾಟಕ ಸರ್ಕಾರ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ.
ಗಾಳಿಪಟ ಹಾರಿಸಲು ಹತ್ತಿ ದಾರವನ್ನೇ ಬಳಸಬೇಕು ಎಂದು ಸರ್ಕಾರ ಸೂಚಿಸಿದೆ. ಈ ಹಿಂದೆ ಚೈನಾ ಮಾಂಜಾವನ್ನು ನಿಷೇಧಿಸಿದ್ದ ಸರ್ಕಾರ ಈ ವರ್ಷ ಪ್ರಾಣಿಪ್ರಿಯರ ಮನವಿಯ ಮೇರೆಗೆ ಗಾಜು ಅಥವಾ ಲೋಹದ ಪುಡಿಯಿಂದ ತಯಾರಿಸಿದ ಮಾಂಜಾವನ್ನು ನಿಷೇಧಿಸುವುದಾಗಿ ಘೋಷಿಸಿದೆ.
ಚೈನಾ ಮಾಂಜಾ, ಗ್ಲಾಸ್ ಕೋಟೆಡ್ ಮಾಂಜಾ ಬಳಕೆಯಿಂದ ಪ್ರಾಣಿ, ಪಕ್ಷಿ, ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳನ್ನು ಕಂಡಿದ್ದು, ಈ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಜನರು ಕೂಡ ಸರ್ಕಾರದ ನಿರ್ಧಾರಕ್ಕೆ ಸಹಕರಿಸಬೇಕು ಎಂದು ಅದು ಮನವಿ ಮಾಡಿದೆ.