ಜಾಗವಿಡಿದೆ ಜೇಬು ಖಾಲಿ
ಜೂಟಾಟದ ಬಂಡಿ ತೆವೆಯುತ್ತಿದೆ
ಪಾಯವೆ ಬಾವಿಯಂತೆ ಕಾಣುತ್ತಿದೆ
ಈ ವ್ಯಾಪಾರಿ ಮನಸಿಗೆ;
ಮರಳು ಸಿಮೆಂಟ್ ಜಲ್ಲಿಕಲ್ಲುಗಳ
ಸದ್ದು ಗುನುಗುತ್ತಿದೆ ಕನಸಿನಲ್ಲೂ
ಕನವರಿಸುತ್ತಿರುವೆ ಒಂದು ಗೂಡಿಗಾಗಿ ||
ಗಾರೆಯವನ ಗದ್ದಲ
ಮರಗೆಲಸದವನ ಚಂಚಲ ಮನಸ್ಸು
ಕಬ್ಬಿಣದವನ ಬಾಗದ ಕಂಬಿ
ವಿದ್ಯುತ್ ನವನ ಓರೆನೋಟ
ನಿವೇಶನ ಪಕ್ಕದವನ ಪರದಾಟಗಳ ಮೀರಿ
ಮಿಕ್ಕರೆಲ್ಲಿ ಚಿಲ್ಲರೆ ಕಾಸು
ಬಡಪಾಯಿ ಕಿಸೆಯೊಳಗೆ
ಹೊಸಮನೆಗೆ ಹಸೆ ಹಾಸುವವನಿಗೆ..||
ಬಂಧುಗಳ ಬಿರುದು ಬಾವಲಿಗಳು ಮೊದಲಿಸಿವೆ
ಹೆಸರು ಬೇರೆ ಇಡಬೇಕಿತ್ತು!
ಜಾಗ ಕಿರಿದಾಯಿತು! ಮತ್ತೊಂದು ಕೋಣೆ
ಇದ್ದರೆ ಚೆನ್ನ!
ಅವರಿಗೇನು ಗೊತ್ತು
ಒಂದು ಬಿಡದೆ ಅಡವಿಟ್ಟಿರುವುದು ಮಡದಿ ಚಿನ್ನ!!
ಅಷ್ಟಲ್ಲದೆ ಹೇಳುವರೆ
‘ ಮನೆ ಕಟ್ಟಿ ನೋಡು’
-ದೆ.ಶಿವರತ್ನಾನಂದ್