ಮೈಸೂರು: ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ಬದಲು, ಕಾಯ್ದೆಯ ಕುರಿತು ಸಮಗ್ರ ಚರ್ಚೆಯಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಗರದ ಗನ್‌ಹೌಸ್‌ನಲ್ಲಿರುವ ಕುವೆಂಪು ಉದ್ಯಾನವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಬಗ್ಗೆ ರೇಷ್ಮೆ ಸಚಿವರು ಕೋಣನಿಗೂ, ಹಸುವಿಗೂ ಹೋಲಿಕೆ ಮಾಡಿರುವುದು ಸರಿಯಲ್ಲ. ಹಸುಗಳು ರೈತರ ಬದುಕಿಗೆ ಆಸರೆಯಾಗಿ ಕಾಯಕ ಮಾಡುತ್ತವೆ, ರೈತರ ಜೀವನಾಡಿಗಳಾಗಿವೆ. ರೈತರು ಗೋವುಗಳನ್ನು ಗೌರವ ಭಾವನೆಯಿಂದ ಪೂಜಿಸುತ್ತಾರೆ. ಇಂತಹ ಪ್ರಾಣಿಗಳನ್ನು ಹತ್ಯೆ ಮಾಡಿ ಎಂದು ಹೇಳುವುದು ಒಪ್ಪುವಂತದ್ದಲ್ಲ. ಕೃಷಿಕರ ಕುಟುಂಬದ ಸದಸ್ಯರ ರೀತಿಯಲ್ಲಿ ಇರುವ ಹಸುಗಳನ್ನು ಹತ್ಯೆ ಮಾಡಲು ಅವಕಾಶ ನೀಡುವುದು ಸರಿಯಲ್ಲ ಎಂದರು.
ವಿಚಾರ ಸಂಕಿರಣ: ಅನಾದಿ ಕಾಲದಿಂದಲೂ ಕೃಷಿ ಜೊತೆ ಜೊತೆಯಾಗಿ ಬದುಕು ನಡೆಸುತ್ತಿರುವ ಗೋವುಗಳನ್ನು ಮಾನವೀಯತೆ ಮೀರಿ ಕೊಲ್ಲಲು ಅವಕಾಶ ಕೊಡುವುದು ನಮ್ಮ ಸಂಸ್ಕೃತಿ ಅಲ್ಲ. ಗೋವುಗಳ ವಿಚಾರದಲ್ಲಿ ಧರ್ಮ ರಾಜಕಾರಣ ಮಾಡುವುದನ್ನು ಬಿಡಬೇಕು. ಕಾನೂನಿನಲ್ಲಿರುವ ಸಾಧಕ ಬಾದಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ಕುರಿತು ಜೂ.೨೮ರಂದು ಬೆಂಗಳೂರಿನಲ್ಲಿ ರೈತ ಸಂಘಟನೆಗಳ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ
ಕಾಡು ಪ್ರಾಣಿಗಳಿಂದ ಕಾಡಂಚಿನ ಭಾಗದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರೈತರ ಬೆಳೆಗಳ ನಾಶ ತಪ್ಪಿಸಲು ಕಾಡಿನ ಒಳಗೆ ಇರುವ ಎಲ್ಲಾ ರೆಸಾರ್ಸ್‌ಗಳನ್ನು ಮುಚ್ಚಿಸಬೇಕು. ಕಾಡಿನ ಒಳಗೆ ಗಣಿಗಾರಿಕೆ ನಿಲ್ಲಿಸಬೇಕು. ಪ್ರಾಣಿಗಳು ಕಾಡಿನ ಒಳಗೆ ಸ್ವೇಚ್ಛಾಚಾರವಾಗಿ ತಿರುಗಾಡಲು ಅವಕಾಶವಾಗುತ್ತಿಲ್ಲ. ಇದರಿಂದ ನಾಡಿಗೆ ಬಂದು ಜನರ ಬಲಿ ಪಡೆಯುತ್ತಿವೆ. ಈ ಸಂಬಂಧ ಸರ್ಕಾರ ಎಚ್ಚೆತ್ತುಕ್ಕೊಳ್ಳದಿದ್ದರೆ ಕಾಡಿನ ಒಳಗೆ ಇರುವ ಅರಣ್ಯ ಇಲಾಖೆ ಕಚೇರಿಗಳನ್ನು ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿರುವುದು ಬಕಾಸುರಮ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಂದುವರಿದ ಪ್ರತಿಭಟನೆ: ಎಸ್‌ಬಿಐ ಬ್ಯಾಂಕುಗಳಲ್ಲಿ ರೈತರಿಗೆ ನೋಟಿಸ್ ನೀಡಿ ಕಿರಿಕುಳ ನೀಡುತ್ತಿದ್ದ ಕಾರಣ ಹಾಗೂ ಕಾನೂನುಬಾಹಿರವಾಗಿ ಪದೇಪದೇ ನೋಟಿಸ್ ನೀಡಿ ತೊಂದರೆ ನೀಡುತ್ತಿದ್ದ ವ್ಯವಸ್ಥಾಪಕರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿದಿದೆ. ಮೈಸೂರು, ಚಾಮರಾಜನಗರ ಜಿಲ್ಲೆಯ ಸಂಘದ ಪದಾಧಿಕಾರಿಗಳು, ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ನಮಗೆ ನ್ಯಾಯ ದೊರಕುವವರೆಗೂ ಕಚೇರಿ ಬಿಟ್ಟು ಹೋಗುವುದಿಲ್ಲ ಎಂದು ರೈತ ಮಿತ್ರ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯ ರೈತ ಸದಸ್ಯರು ಸರಸ್ವತಿಪುರಂನಲ್ಲಿರುವ ಪ್ರಾದೇಶಿಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಸಭೆ ನಡೆಸಿ ಸಭೆಯಲ್ಲಿ ರೈತರ ಸಮಸ್ಯೆಗೆ ಪರಿಹಾರ ದೊರಕದ ಕಾರಣ ಕಚೇರಿಯಲ್ಲಿ ಪ್ರತಿಭಟನೆ ಮುಂದುವರೆದಿದೆ.