ಮೈಸೂರು: ಬಿ.ಎನ್ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳ ವತಿಯಿಂದ ಜಿ-೨೦ ಅಂಗವಾಗಿ ನಡೆದ ರಾಜ್ಯಮಟ್ಟದ ಚರ್ಚೆ, ಪ್ರಬಂಧ ಮತ್ತು ವಚನ ಓದು-ವ್ಯಾಖ್ಯಾನ ಸ್ಪಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ಒಟ್ಟು ೮೭ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೈಸೂರಿನ ನಟರಾಜ ಪ್ರಥಮ ದರ್ಜೆ ಕಾಲೇಜಿನ ಟಿ.ಎ.ಚಂದನ, ಹಾಸನದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಎಸ್.ಅಘಮರ್ಶನ ಮತ್ತು ಮೈಸೂರಿನ ಮಹಾರಾಣಿ ಕಾಲೇಜಿನ ಬಿ.ಸುಷ್ಮಾ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದರು. ಚರ್ಚಾ ಸ್ಪರ್ಧೆಯಲ್ಲಿ ೫೨ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೈಸೂರಿನ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಆರ್.ಕುಸುಮಾಬಾಯಿ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಎನ್.ಲಕ್ಷ್ಮೀ ಮತ್ತು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಬಿ.ಜಿ.ಮೋನಿಕಾ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದುಕೊಂಡರು.
ವಚನ ಓದು-ವ್ಯಾಖ್ಯಾನ ಸ್ಪರ್ಧೆಯಲ್ಲಿ ೩೮ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಎನ್.ಲಕ್ಷ್ಮೀ, ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಡಿ.ಸಿ.ಚೇತನ ಮತ್ತು ತಿ.ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಕಿರಣ್ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದುಕೊಂಡರು. ತೀರ್ಪುಗಾರರಾಗಿ ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಉಮೇಶ, ನಂಜನಗೂಡಿನ ಪ್ರಥಮ ದರ್ಜೆ ಕಾಲೇಜಿನ ಡಾ.ಡಿ.ಕೆ.ಉಷಾ, ಜೆಎಸ್‌ಎಸ್ ಕಾಲೇಜಿನ ಪ್ರೊ.ಹೆಚ್. ದೇವಣ್ಣ, ಎಸ್.ನಂಜುಂಡಸ್ವಾಮಿ, ಡಾ.ಶೋಭ, ಡಾ.ಡಿ.ಬಿ.ಶಿವಕುಮಾರ ಮತ್ತು ಡಾ.ಬಿ.ಪ್ರಭುಸ್ವಾಮಿ ಇದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರಕುಮಾರ್ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಅಭಿನಂದನಾ ನುಡಿಗಳನ್ನಾಡಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕೆ ಹೊರತು, ಇದರಲ್ಲಿ ಸೋಲು ಗೆಲುವು ಮುಖ್ಯವಲ್ಲ. ನಿಮ್ಮ ಭಾಗವಹಿಸುವಿಕೆಯೇ ದೊಡ್ಡದು. ಈ ಮನೋಭಾವವನ್ನು ಮುಂದಿನ ದಿನಗಳಲ್ಲಿಯೂ ಕಾಪಾಡಿಕೊಳ್ಳಿ ಎಂದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಅಭಿನಂದನೆ ತಿಳಿಸಿದರು. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವಿ ಕಾಲೇಜುಗಳಿಂದ ಆಗಮಿಸಿದ್ದ ೧೫೦ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.