ಗುಂಡ್ಲುಪೇಟೆ: ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ಪಟ್ಟಣದ ಹೊರ ವಲಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕಚೇರಿ ಹಿಂಭಾಗದಲ್ಲಿ ನಡೆದಿದೆ.
ಪಟ್ಟಣದ ತೋಟದ ಮನೆ ನಿವಾಸಿ ಸಿದ್ದೇಗೌಡ ಹಸು ಕಳೆದುಕೊಂಡವರು. ಇವರು ಮೇಯಲು ಬಿಟ್ಟಿದ್ದ ಸಂದರ್ಭ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ ಎನ್ನಲಾಗುತ್ತಿದೆ. ಈ ಭಾಗದಲ್ಲಿ ಆಗಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ತೋಟದ ಮನೆಗಳಲ್ಲಿ ವಾಸಿಸುವ ಮಾಲೀಕರು ಭಯಭೀತರಾಗಿದ್ದಾರೆ.
ಪಕ್ಕದಲ್ಲಿ ರಾಘವೇಂದ್ರಸ್ವಾಮಿಯವರ ಮಠದ ಜೊತೆಗೆ ಖಾಸಗೀಯವರ ವಾಟರ್ ಪ್ಲಾಂಟ್ ಇದೆ. ಹೀಗಾಗಿ ಜನ ಸಂಚಾರ ಸಾಮಾನ್ಯವಾಗಿರುತ್ತದೆ. ಚಿರತೆ ದಾಳಿಗೆ ಹಸು ಬಲಿಯಾಗಿರುವ ಹಿನ್ನೆಲೆಯಲ್ಲಿ ಸುತ್ತಲಿನ ನಿವಾಸಿಗಳು ಭಯದ ವಾತಾವರಣದಲ್ಲಿ ಬದುಕಬೇಕಿದೆ. ಆದ್ದರಿಂದ ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಬೋನ್ ಇರಿಸಿ ಚಿರತೆ ಸೆರೆ ಹಿಡಿಯಬೇಕು ಎಂದು ಕರ್ನಾಟಕ ಕಾವಲು ಪಡೆ ತಾಲೂಕು ಅಧ್ಯಕ್ಷ ಎ.ಅಬ್ದುಲ್‍ಮಾಲಿಕ್ ಒತ್ತಾಯಿಸಿದ್ದಾರೆ.