ಮಡಿಕೇರಿ: ಇದೇ ಜುಲೈ, ೦೧ ರಿಂದ ೭ ರವರೆಗೆ ವನ ಮಹೋತ್ಸವ ಸಪ್ತಾಹ ಕಾರ್ಯಕ್ರಮ ಜರುಗಲಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವನ ಮಹೋತ್ಸವ ಸಪ್ತಾಹ ಕಾರ್ಯಕ್ರಮ ಅನುಷ್ಠಾನ ಸಂಬಂಧ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೃಹತ್ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸ್ಥಳೀಯ ಸಂಸ್ಥೆಗಳು ಹೀಗೆ ಎಲ್ಲೆಡೆ ವನ ಮಹೋತ್ಸವ ಸಪ್ತಾಹ ಪ್ರಯುಕ್ತ ಗಿಡಗಳನ್ನು ನೆಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ವನ ಮಹೋತ್ಸವ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನೆಟ್ಟ ಗಿಡಗಳನ್ನು ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಅವರು ಮಾಹಿತಿ ನೀಡಿ ವನಮಹೋತ್ಸವ ಸಪ್ತಾಹ ಪ್ರಯುಕ್ತ ಅರಣ್ಯ ಇಲಾಖೆ ವತಿಯಿಂದ ೩೩ ಕಾರ್ಯಕ್ರಮಗಳು, ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿ ೨೦ ಕಾರ್ಯಕ್ರಮಗಳನ್ನು ಆಯೋಜಿಸಿ ವಿವಿಧೆಡೆ ಗಿಡಗಳನ್ನು ನೆಡಲಾಗುತ್ತದೆ ಎಂದು ತಿಳಿಸಿದರು.
?ಜಿಲ್ಲೆಯ ನೆಡುತೋಪುಗಳಲ್ಲಿ ೭೭,೫೦೦ ಮತ್ತು ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಆವರಣದಲ್ಲಿ ೨೨ ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಎ.ಟಿ.ಪೂವಯ್ಯ ಅವರು ಮಾಹಿತಿ ನೀಡಿದರು.?
ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡಬಹುದಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಉಚಿತವಾಗಿ ಗಿಡಗಳನ್ನು ಪಡೆಯಬಹುದಾಗಿದೆ ಎಂದು ಎ.ಟಿ.ಪೂವಯ್ಯ ಅವರು ಮಾಹಿತಿ ನೀಡಿದರು.
ಜುಲೈ, ೦೧ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಆವರಣದಲ್ಲಿ ವನ ಮಹೋತ್ಸವ ಸಪ್ತಾಹ ಕಾರ್ಯಕ್ರಮಕ್ಕೆ ಗಣ್ಯರಿಂದ ಚಾಲನೆ ದೊರೆಯಲಿದೆ ಎಂದು ಎ.ಟಿ.ಪೂವಯ್ಯ ಮಾಹಿತಿ ನೀಡಿದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ವನಜಾಕ್ಷಿ, ವಾಮನ ಟಿ.ಕೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಿ.ಎಸ್.ದಯಾನಂದ, ಗೋಪಾಲ್, ಸಹಾಯಕ ಕೃಷಿ ಅಧಿಕಾರಿ ಆರ್.ಗೌರಿ, ಬಿಆರ್‌ಸಿ ಹೇಮಂತ್, ಲೋಕೇಶ್, ಅರಣ್ಯ ಇಲಾಖೆ ಅಧಿಕಾರಿಗಳಾದ ಹನುಮಂತರಾಜು, ಮರೀಸ್ವಾಮಿ, ರಾಘವೇಂದ್ರ, ವಿಮಲ್ ಬಾಬು, ಗಿರೀಶ್, ಮಧುಸೂದನ, ಇತರರು ಇದ್ದರು.