ಮಡಿಕೇರಿ: ಜಿಲ್ಲೆಯ ೧೦೩ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗಧಿ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಇದೇ ಜೂನ್ ೧೨ ರಿಂದ ಪ್ರಕ್ರಿಯೆಗಳು ಆರಂಭವಾಗಲಿದೆ. ಆದ್ದರಿಂದ ಆಯಾಯ ತಾಲ್ಲೂಕಿಗೆ ಸಂಬಂಧಿಸಿದ ಗ್ರಾ.ಪಂ.ಸದಸ್ಯರು ಮೀಸಲಾತಿ ನಿಗಧಿಪಡಿಸುವ ಸಭೆಗೆ ಆಗಮಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೋರಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳ ಎಲ್ಲಾ ಗ್ರಾ.ಪಂ.ಗಳ ಚುನಾಯಿತ ಸದಸ್ಯರುಗಳ ಸಮ್ಮುಖದಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ಸ್ಥಾನ ನಿಗಧಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಆ ದಿಸೆಯಲ್ಲಿ ಜೂನ್, ೧೨ ರಂದು ಬೆಳಗ್ಗೆ ೧೧ ಗಂಟೆಗೆ ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ ೩ ಗಂಟೆಗೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ನಿಗಧಿ ಮಾಡುವ ಸಭೆ ನಡೆಯಲಿದೆ.
ಜೂನ್, ೧೩ ರಂದು ಬೆಳಗ್ಗೆ ೧೧ ಗಂಟೆಗೆ ಕುಶಾಲನಗರ ಎಪಿಸಿಎಂಸಿ ಸಭಾಂಗಣ, ಮಧ್ಯಾಹ್ನ ೩ ಗಂಟೆಗೆ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್‌ನಲ್ಲಿ ಸಭೆ ನಡೆಯಲಿದೆ. ಜೂನ್, ೧೪ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನ ನಿಗಧಿ ಮಾಡುವ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.
ರಾಜ್ಯ ಚುನಾವಣಾ ಆಯೋಗವು ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಗ್ರಾ.ಪಂ.ಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆ/ಸ್ಥಾನದ ವರ್ಗವಾರು ಸಂಖ್ಯೆಯನ್ನು ನಿಗಧಿ ಮಾಡಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿದರು.
ಮಡಿಕೇರಿ ತಾಲ್ಲೂಕಿನಲ್ಲಿ ೨೬ ಗ್ರಾ.ಪಂ.ಗಳಿದ್ದು, ಅದರಲ್ಲಿ ೧೩ ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿ ೨(ಒಬ್ಬ ಮಹಿಳೆ), ಅನುಸೂಚಿತ ಪಂಗಡ ೧ (ಮಹಿಳೆ), ಹಿಂದುಳಿದ ವರ್ಗ(ಅ) ೭(೪ ಮಹಿಳೆ), ಹಿಂದುಳಿದ ವರ್ಗ(ಬ) ೨ (೧ ಮಹಿಳೆ), ಸಾಮಾನ್ಯ ೧೪(೬ ಮಹಿಳೆ) ನಿಗಧಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ವಿರಾಜಪೇಟೆಯಲ್ಲಿ ೧೭ ಗ್ರಾಮ ಪಂಚಾಯಿತಿಗಳಿದ್ದು, ೯ ಮಹಿಳೆಯರಿಗೆ ನಿಗಧಿಯಾಗಿದೆ. ಅನುಸೂಚಿತ ಜಾತಿ ೨(೧ ಮಹಿಳೆ), ಅನುಸೂಚಿತ ಪಂಗಡ ೨(೧ ಮಹಿಳೆ), ಹಿಂದುಳಿದ ವರ್ಗ ೩(೨ ಮಹಿಳೆ), ಹಿಂದುಳಿದ ವರ್ಗ(ಬ) ೧, ಸಾಮಾನ್ಯ ೯(೫ ಮಹಿಳೆ) ಮೀಸಲಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ ೨೩ ಗ್ರಾ.ಪಂ.ಗಳಿದ್ದು, ಇದರಲ್ಲಿ ೧೨ ಗ್ರಾ.ಪಂ.ಗಳು ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಯಲ್ಲಿ ೩(೨ ಮಹಿಳೆ), ಅನುಸೂಚಿತ ಪಂಗಡ ೧ ಮಹಿಳೆ, ಹಿಂದುಳಿದ(ಅ) ೬(೩ ಮಹಿಳೆ), ಹಿಂದುಳಿದ(ಬ) ೧ ಮಹಿಳೆಯರಿಗೆ, ಸಾಮಾನ್ಯ ೧೨ ರಲ್ಲಿ ೫ ಮಹಿಳೆಯರಿಗೆ ಮೀಸಲಾಗಿದೆ.
ಕುಶಾಲನಗರ ತಾಲ್ಲೂಕಿನಲ್ಲಿ ೧೬ ಗ್ರಾ.ಪಂಗಳಿದ್ದು, ೮ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿ ೨(೧ ಮಹಿಳೆ), ಅನುಸೂಚಿತ ಪಂಡಗ ೧ (೧ ಮಹಿಳೆ), ಹಿಂದುಳಿದ ವರ್ಗ (ಅ) ೪ (೨ ಮಹಿಳೆಗೆ), ಹಿಂದುಳಿದ ವರ್ಗ (ಬ) ೧ (೧ ಮಹಿಳೆಗೆ) ಸಾಮಾನ್ಯ ೮(೩ ಮಹಿಳೆ) ಮೀಸಲಾಗಿದೆ.
ಹಾಗೆಯೇ ಪೊನ್ನಂಪೇಟೆ ತಾಲ್ಲೂಕಿನಲ್ಲಿ ೨೧ ಗ್ರಾಮ ಪಂಚಾಯಿತಿಗಳಿದ್ದು, ೧೧ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿ ೧ (೧ ಮಹಿಳೆ), ಅನುಸೂಚಿತ ಪಂಗಡ ೫ (೩ ಮಹಿಳೆಯರಿಗೆ), ಹಿಂದುಳಿದ ವರ್ಗ (ಅ) ೩ (೨ ಮಹಿಳೆಯರಿಗೆ), ಹಿಂದುಳಿದ ವರ್ಗ (ಬ) ೧, ಸಾಮಾನ್ಯ ೧೧ ರಲ್ಲಿ ೫ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ೨೫ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು, ಹಾಗೆಯೇ ೫೦ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಇವೆ ಎಂದು ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿದರು.
ಮಡಿಕೇರಿ ತಾಲ್ಲೂಕಿನಲ್ಲಿ ೬ ಜಿ.ಪಂ., ೧೨ ತಾ.ಪಂ.ಕ್ಷೇತ್ರಗಳು, ಸೋಮವಾರಪೇಟೆ ತಾಲ್ಲೂಕಿನಲ್ಲಿ ೫ ಜಿ.ಪಂ.೯ ತಾ.ಪಂ. ಕ್ಷೇತ್ರಗಳು, ವಿರಾಜಪೇಟೆ ತಾಲ್ಲೂಕಿನಲ್ಲಿ ೪ ಜಿ.ಪಂ. ಕ್ಷೇತ್ರಗಳಿದ್ದು, ೯ ತಾ.ಪಂ. ಕ್ಷೇತ್ರಗಳಿವೆ. ಕುಶಾಲನಗರ ತಾಲ್ಲೂಕಿನಲ್ಲಿ ೫ ಜಿ.ಪಂ.ಕ್ಷೇತ್ರಗಳೀದ್ದು, ೯ ತಾ.ಪಂ.ಕ್ಷೇತ್ರಗಳಿವೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ ೫ ಜಿ.ಪಂ. ಮತ್ತು ೧೧ ತಾ.ಪಂ. ಕ್ಷೇತ್ರಗಳಿವೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.
ರಾಜ್ಯ ಚುನಾವಣಾ ಆಯೋಗವು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-೨೦೨೩ಕ್ಕೆ ಸಂಬಂಧಿಸಿದಂತೆ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ತಯಾರಿಸಲು ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯು ಏಕಕಾಲದಲ್ಲಿ ನಡೆಯುವುದರಿಂದ ಹಾಗೂ ಒಂದೇ ಮತದಾರರ ಪಟ್ಟಿ ಉಪಯೋಗಿಸುವುದರಿಂದ, ಮತದಾರರ ಪಟ್ಟಿಯು ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳ ಹಾಗೂ ತಾಲ್ಲೂಕು ತಹಶೀಲ್ದಾರರ ಸಹಿ ಪದನಾಮ ಒಳಗೊಂಡಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು/ ಪ್ರದೇಶಗಳಲ್ಲಿ ಅಗತ್ಯತೆಗೆ ತಕ್ಕಂತೆ ಕನಿಷ್ಠ ೪೦೦ ರಿಂದ ೧೫೦೦ ಮತದಾರರು ಇರುವಂತೆ ಮತದಾರರ ಪಟ್ಟಿ ತಯಾರಿಸಲಾಗುತ್ತದೆ ಎಂದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ದಿನಾಂಕ:೦೧-೦೧-೨೦೨೩ ರ ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ದಿನಾಂಕ:೦೫-೦೧-೨೦೨೩ ರಂದು ಅಂತಿಮ ಮತದಾರರ ಪಟ್ಟಿಯನ್ನು ಹಾಗೂ ದಿನಾಂಕ ೨೦-೦೪-೨೦೨೩ರ ಪೂರಕ ಪಟ್ಟಿಯ ಡಾಟಾವನ್ನು ಅಳವಡಿಸಿಕೊಂಡು ತಯಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ವಿವರಿಸಿದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ತಯಾರಿಸಲಾದ ಮತದಾರರ ಪಟ್ಟಿಗೆ ನೇರವಾಗಿ ಹೆಸರು ಸೇರ್ಪಡೆ ಮಾಡಲು ಅವಕಾಶವಿರುವುದಿಲ್ಲ.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ವಿಧಾನಸಭಾ ಮತದಾರರ ಪಟ್ಟಿಯ ನೋಂದಣಾಧಿಕಾರಿಗಳು ನಿಯಮಾನುಸಾರ ಅಂಗೀಕರಿಸುವ, ಸೇರ್ಪಡೆ, ಬಿಡತಕ್ಕ ಮತ್ತು ತಿದ್ದುಪಡಿಗಳನ್ನು ಅಳವಡಿಸಿಕೊಂಡು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮತದಾರರ ಪಟ್ಟಿಗೆ ಪೂರಕ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಲಾಗುತ್ತದೆ. ೧೫೦೦ಕ್ಕೂ ಹೆಚ್ಚಿಗೆ ಮತದಾರರನ್ನು ಹೊಂದಿರುವ ಮತಗಟ್ಟೆಯನ್ನು ವಿಭಜಿಸಿ ಹೆಚ್ಚುವರಿ (ಂuxiಟiಚಿಡಿಥಿ) ಮತಗಟ್ಟೆಯನ್ನು ರಚಿಸಲಾಗುವುದು.
ಸೇವಾ ಮತದಾರರ ಪಟ್ಟಿ: ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ) ನಿಯಮಗಳು ೧೯೯೩ರ ನಿಯಮ ೪೨(ಎ) ರಂತೆ ಸೇವಾ ಮತದಾರರು ಅಂಚೆ ಮೂಲಕ ಮತ ನೀಡಲು ಹಕ್ಕುಳ್ಳವರಾಗಿರುತ್ತಾರೆ. ಆದ್ದರಿಂದ ವಿಧಾನಸಭಾ ಕ್ಷೇತ್ರದ ಕೊನೆಯ ಭಾಗವಾದ ಸೇವಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಸೇವಾ ಮತದಾರರ ಪಟ್ಟಿ ತಯಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.
ಮತದಾರರ ಪಟ್ಟಿ ಗಣಕೀಕರಣ ಮತ್ತು ಮುದ್ರಣ ಸಂಬಂಧ ಜೂನ್, ೧೩ ರವರೆಗೆ ಮುದ್ರಕರಿಂದ ಪ್ರಥಮ ಚೆಕ್‌ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸುವುದು. ಪರಿಶೀಲನೆಯ ನಂತರ ಪ್ರಥಮ ಚೆಕ್‌ಲಿಸ್ಟ್‌ನಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು ಮುದ್ರಕರಿಂದ ಮಾಡಿಸಿ ಕರಡು ಮತದಾರರ ಪಟ್ಟಿಯ ಪ್ರತಿಗಳನ್ನು ಮುದ್ರಕರಿಂದ ಪಡೆದುಕೊಳ್ಳಲಾಗುತ್ತದೆ ಎಂದರು.
ಜಿ.ಪಂ. ಮತ್ತು ತಾ.ಪಂ.ಚುನಾವಣೆ ಸಂಬಂಧ ಜೂನ್, ೧೪ ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಜೂನ್, ೧೯ ರಂದು ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್, ೨೨ ರಂದು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲು ಕೊನೆಯ ದಿನವಾಗಿದೆ. ಜೂನ್, ೨೫ ರಂದು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಮುದ್ರಕರಿಂದ ಅಗತ್ಯ ಬದಲಾವಣೆಯನ್ನು ಮಾಡಿಸಿ ಅಂತಿಮ ಚೆಕ್‌ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಜೂನ್, ೨೭ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಜನವರಿ, ೦೧, ೨೦೨೪ ರಲ್ಲಿ ಅರ್ಹತಾ ದಿನಾಂಕದಂತೆ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕೈಗೊಳ್ಳಲು ಭಾರತ ಚುನಾವಣಾ ಆಯೋಗವು ವೇಳಾಪಟ್ಟಿ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚುನಾವಣಾ ತಹಶೀಲ್ದಾರ್ ಸಿ.ಜಿ. ರವಿಶಂಕರ, ಇತರರು ಇದ್ದರು.