ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಜೂನ್ ೨೧ ರಂದು ಬೆಳಿಗ್ಗೆ ೭ ರಿಂದ ೭:೪೫ರ ವರೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಡ್ಯಾಂ ಆವರಣದಲ್ಲಿ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಬೇಕು ಅಧಿಕಾರಿಗಳು ತಮಗೆ ವಹಿಸಿರುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಅಂದು ಬೆಳಿಗ್ಗೆ ೭ ಗಂಟೆಗೆ ಯೋಗ ಪ್ರಾರಂಭವಾಗಲಿದ್ದು, ಅಧಿಕಾರಿಗಳು, ಯೋಗಪಟುಗಳು, ಜನರು ಬೆಳಿಗ್ಗೆ ೬ ಕ್ಕೆ ಕಾರ್ಯಕ್ರಮದ ಸ್ಥಳದಲ್ಲಿರಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ೧೫೦೦ ಜನರು ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಗುರಿ ನಿಗದಿಪಡಿಸಲಾಗಿದ್ದು, ಪ್ರತಿ ತಾಲ್ಲೂಕಿನಿಂದ ೨೦೦ ರಿಂದ ೩೦೦ ಜನರನ್ನು ಕರೆ ತರಬೇಕು. ಜೊತೆಗೆ ಎರಡು ದಿನಗ ಪೂರ್ವ ಪ್ರದರ್ಶನ ನೀಡಬೇಕು. ಯೋಗ ಶಿಕ್ಷಕರು ಭಾಗಿಯಾಗಲಿದ್ದಾರೆ ಎಂದರು.
ಇದಕ್ಕಾಗಿ ಪ್ರತಿ ಹಳ್ಳಿ, ನಗರ, ಪಟ್ಟಣ, ಜಿಲ್ಲೆ ಮುಂತಾದ ಎಲ್ಲಾ ಸ್ಥಳದಲ್ಲಿ ಯೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪ್ರಮುಖ ಸಾರ್ವಜನಿಕ ಸಂಸ್ಥೆಗಳಾದ ಆಸ್ಪತ್ರೆ, ಪೊಲೀಸ್ ಠಾಣೆ, ಬಸ್ ಸ್ಟ್ಯಾಂಡ್, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಬ್ಯಾನರ್ ಮತ್ತು ಯೋಗ ಕುರಿತು ಮಾನ್ಯ ಪ್ರಧಾನ ಮಂತ್ರಿಯವರ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಬೇಕು ಎಂದರು.
ಶಿಷ್ಟಚಾರದ ಪ್ರಕಾರ ಜನಪ್ರತಿನಿಧಿಗಳು ಹಾಗೂ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಹೇಳಿದರು.
ಜಿಲ್ಲೆಯ ಯೋಗ ಸಂಸ್ಥೆಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ ಎಸ್.ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಆಯುಷ್ ಯೋಗ ತರಬೇತುದಾರರುಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇರುವ ಯೋಗ ತರಬೇತುದಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
ವಿಶೇಷ ಬಸ್ ವ್ಯವಸ್ಥೆ : ಜೂನ್ ೨೧ ರಂದು ೯ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಗಮಿಸುವ ಯೋಗಪಟುಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದ್ದು, ಅಂದು ಬೆಳಿಗ್ಗೆ ಮಂಡ್ಯದಿಂದ ಕೆ.ಆರ್.ಎಸ್, ಕೆ.ಆರ್.ಎಸ್ ನಿಂದ ಮಂಡ್ಯದವರೆಗೆ ಬಸ್ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು ಅವರು ತಿಳಿಸಿದರು.
ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾರಿಗೂ ಸಿಹಿ ಹಾಗೂ ತಿಂಡಿಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಮಂಡ್ಯ ಉಪವಿಭಾಗಾಧಿಕಾರಿ ಕೃಷ್ಣಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ಮೀರಶಿವಲಿಂಗಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಓಂಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್, ತಹಶಿಲ್ದಾರ್‍ಗಳಾದ ವಿಜಯ್ ಕುಮಾರ್, ಸೌಮ್ಯ, ಅಶ್ವಿನಿ, ನರಸಿಂಹಮೂರ್ತಿ, ಹಿರಿಯ ಯೋಗ ಶಿಕ್ಷಕರಾದ ಶಂಕರನಾರಾಯಣ ಶಾಸ್ತ್ರಿ , ಆಯುಷ ವೈದ್ಯಾಧಿಕಾರಿ ಡಾ.ಲೋಕೇಶ್ ಎಸ್.ಎನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.