ಬೆಂಗಳೂರು: ಕುಂಭಮೇಳ 2025 ರಲ್ಲಿ ಸಾಕಷ್ಟು ವೈರಲ್ ಆಗಿದ್ದ ಯುವತಿ ಮೊನಾಲಿಸಾ ಭೋಸ್ಲೆ ಅಂತರ್‌ಧರ್ಮೀಯ ವಿವಾಹವಾಗಿದ್ದಾರೆ. ಕುಟುಂಬಸ್ಥರಿಲ್ಲದೇ ಕೇರಳದ ದೇವಸ್ಥಾನದಲ್ಲಿ ಪ್ರಿಯಕರ ಫರ್ಮಾನ್ ಖಾನ್ ಎಂಬುವವರನ್ನು ವರಿಸಿದ್ದಾರೆ.
ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಉತ್ತರ ಪ್ರದೇಶ ಮೂಲದ ಮೊನಾಲಿಸಾನ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ದೈವಕನ್ಯೆ ಎಂದು ಹಲವರು ಪೋಸ್ಟ್ ಶೇರ್ ಮಾಡಿದ್ದರು. ದೊಡ್ಡ ಮಟ್ಟದಲ್ಲಿ ಆಕೆಯ ಫೋಟೋಗಳು ವೈರಲ್ ಆಗಿದ್ದವು. ಆ ಬಳಿಕ ಮೊನಾಲಿಸಾಗೆ ಸಿನಿಮಾ, ಟಿವಿ ಚಾನೆಲ್ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಿದ್ದವು. ಸದ್ಯ ಪ್ರಿಯಕರನೊಟ್ಟಿಗೆ ಮದುವೆಯಾಗಿದ್ದಾಳೆ.
ಕುಟುಂಬದಿಂದ ವಿರೋಧ; ಆಶ್ರಯ ಕೋರಿದ ಮೊನಾಲಿಸಾ
ಮಹಾರಾಷ್ಟ್ರದ ನಟ ಮತ್ತು ರೂಪದರ್ಶಿಯಾಗಿದ್ದ ಫರ್ಮಾನ್ ಖಾನ್ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದು, ತಮ್ಮ ಕುಟುಂಬದಿಂದ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಇತ್ತೀಚೆಗೆ ಕೇರಳಕ್ಕೆ ಆಗಮಿಸಿ ಆಶ್ರಯ ಕೋರಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಅಗತ್ಯ ವಿಚಾರಣೆ ನಡೆಸಿದ ನಂತರ, ಮೊನಾಲಿಸಾ ವಯಸ್ಕಳಾಗಿದ್ದಾಳೆ ಮತ್ತು ಆದ್ದರಿಂದ ಯಾರನ್ನು ಮದುವೆಯಾಗಬೇಕೆಂದು ನಿರ್ಧರಿಸುವ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾಳೆ ಎಂದು ಪೊಲೀಸರು ತೀರ್ಮಾನಿಸಿದರು.
ಬುಧವಾರ ತಿರುವನಂತಪುರದ ಅರುಮನೂರ್ ದೇವಸ್ಥಾನದಲ್ಲಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ವಿವಾಹವಾದರು. ಪೊಲೀಸರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.



