Saturday, April 19, 2025
Google search engine

HomeUncategorizedತಿನ್ನುವ ಅಕ್ಕಿ ಹಾಗೂ ಬಡವರ ಮೇಲೆ ರಾಜಕೀಯ ಸರಿಯಲ್ಲ: ಡಿ ಕೆ ಶಿವಕುಮಾರ್

ತಿನ್ನುವ ಅಕ್ಕಿ ಹಾಗೂ ಬಡವರ ಮೇಲೆ ರಾಜಕೀಯ ಸರಿಯಲ್ಲ: ಡಿ ಕೆ ಶಿವಕುಮಾರ್


ಮೈಸೂರು:
ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಇಂತಹ ತಾರತಮ್ಯವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ, ಹೋರಾಟ ಮಾಡಲು ಕಾರ್ಯಕ್ರಮ ರೂಪಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರಕ್ಕೆ ಪುಕ್ಸಟ್ಟೆಯಾಗಿ ಅಕ್ಕಿ ಕೊಡುವಂತೆ ನಾವು ಕೇಳಿಲ್ಲ. ನೀವು ಯಾವ ರೀತಿ ಅಕ್ಕಿ ಕೊಡುತ್ತಿದ್ದರೋ ಅದೇ ರೀತಿ ಕೊಡಿ ಎಂದು ಕೇಳುತ್ತಿದ್ದೇವೆ. ಜು.೧ರಿಂದ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆಯಡಿ ೧೦ ಕೆಜಿ ಅಕ್ಕಿ ಕೊಡುತ್ತೇವೆಂದು ತೀರ್ಮಾನ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ಹೇಳಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆಲಂಗಾಣ, ಛತ್ತಿಸ್‌ಗಢ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತಿದ್ದಾರೆ. ನಮಗೆ ಕೊಡಬೇಕಾಗುತ್ತದೆ ಎಂಬ ಕಾರಣದಿಂದ ಬೇರೆ ರಾಜ್ಯಗಳಿಗೂ ಕೊಡಬೇಕಾದ ಅಕ್ಕಿಯ ಸರಬರಾಜನ್ನೂ ಸಹ ಕೇಂದ್ರ ಸರ್ಕಾರ ಹಿಂಪಡೆದಿದೆ. ಕೇಂದ್ರದ ಈ ತಾರತಮ್ಯ ಖಂಡನೀಯ ಎಂದು ಕಿಡಿ ಕಾರಿದರು.
ಕರ್ನಾಟಕದ ರೈತರಿಂದಲೇ ಅಕ್ಕಿ ಖರೀದಿ ಮಾಡಬೇಕೆಂಬ ಕುರಿತು ಪ್ರತಿಕ್ರಿಯಿಸಿ, ಅಕ್ಕಿ, ಬಿತ್ತನೆ ಬೀಜ, ರಸಗೊಬ್ಬರ ಹಂಚಿಕೆ ಬಗ್ಗೆ ಪಾರದರ್ಶಕತೆ ಇರಬೇಕು. ಅದಕ್ಕೊಂದು ನಿಯಮ ಇದೆ. ಹೇಗೆ, ಏನು, ಎಷ್ಟು ಕೆಜಿ ಕೊಡಬೇಕು ಎಂದು ತಿಳಿಸಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮಾಡಲು ಸಾಧ್ಯವಿಲ್ಲ. ನ್ಯಾಯಬದ್ಧವಾಗಿರುವ ಕೆಲವು ಸಂಸ್ಥೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಲವು ಸಂಸ್ಥೆಗಳಿದ್ದು, ಅದರ ಪ್ರಕಾರವೇ ನಾವು ಖರೀದಿ ಮಾಡಬೇಕು ಎಂದು ಹೇಳಿದರು.
ಭರ್ಜರಿ ಸ್ವಾಗತ: ಉಪ ಮುಖ್ಯಮಂತ್ರಿಯಾದ ಬಳಿಕ ಮೈಸೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮಂಡಕಳ್ಳಿ ವಿಮಾನದಲ್ಲಿ ಕಾಂಗ್ರೆಸ್ ವತಿಯಿಂದ ಭರ್ಜರಿಯಾಗಿ ಸ್ವಾಗತಿಸಲಾಯಿತು. ಬಳಿಕ ಪೊಲೀಸ್ ಇಲಾಖೆ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು.


ನಮ್ಮ ಸರ್ಕಾರ ಯಾರ ಬಳಿಯೂ ಬೊಟ್ಟು ಮಾಡಿ ತೋರಿಸಿಕೊಳ್ಳುವ ರೀತಿ ಕೆಲಸ ಮಾಡುವುದಿಲ್ಲ. ತಿನ್ನುವ ಅಕ್ಕಿ ಹಾಗೂ ಬಡವರ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ. ಕೇಂದ್ರದ ಈ ನಿಲುವನ್ನು ಖಂಡಿಸುತ್ತೇನೆ.
-ಡಿ.ಕೆ.ಶಿವಕುಮಾರ್, ಡಿಸಿಎಂ

ಅನ್ನಭಾಗ್ಯಕ್ಕೆ ಹಣಕಾಸಿನ ವ್ಯವಸ್ಥೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ಕಡೆ ಬೆರಳು ಮಾಡದೇ ಹೊರಗಡೆಯಿಂದ ಖರೀದಿ ಮಾಡಿಯಾದರೂ ಅನ್ನಭಾಗ್ಯ ಯೋಜನೆಯಡಿ ನೀಡಿದ್ದ ಭರವಸೆಯಂತೆ ತಲಾ ೧೦ ಕೆಜಿ ಅಕ್ಕಿಯನ್ನು ಪಡಿತರದಾರರಿಗೆ ನೀಡಬೇಕು. ಅಕ್ಕಿ ನೀಡಲು ಆಗದಿದ್ದರೆ ಪಡಿತರದಾರರ ಖಾತೆಗಳಿಗೆ ಡಿಬಿಟಿ, ಹಣಪಾವತಿ ಮಾಡಿ ಇಲ್ಲವಾದರೆ, ಜನರೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತೇವೆ
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

RELATED ARTICLES
- Advertisment -
Google search engine

Most Popular