ಮುಂದಿನ ಸಿಎಂ ಯಾರು? ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಚಾಲ್ತಿಯಲ್ಲಿದೆ. ಸಿಎಂ ಸಿದ್ದರಾಮಯ್ಯ, ಕುರ್ಚಿಗೆ ಭದ್ರವಾಗಿ ಅಂಟಿಕೊಂಡಿದ್ದಾರೆ. ಇನ್ನು ಡಿಕೆ ಶಿವಕುಮಾರ್, ಕುರ್ಚಿ ತಮಗೆ ಬೇಕೆಂದು ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದರ ನಡುವೆ ಈಗ ‘ದರ್ಶನ್ ಮುಂದಿನ ಸಿಎಂ’ ಎಂದು ಅಭಿಮಾನಿಗಳು ಹೊಸ ಆರ್ಭಟ ಎಬ್ಬಿಸಿದ್ದಾರೆ. ಇದಕ್ಕೆ ಕಾರಣ ‘ಡೆವಿಲ್’ ಸಿನಿಮಾ. ಇಂದು (ಡಿ. 11) ‘ಡೆವಿಲ್’ ಸಿನಿಮಾ ಬಿಡುಗಡೆ ಆಗಿದೆ. ದರ್ಶನ್ ಜೈಲಿನಲ್ಲಿರುವಾಗ ಬಿಡುಗಡೆ ಆಗುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ದರ್ಶನ್ ಅವರು, ತಾವು ರಾಜಕೀಯಕ್ಕೆ ಬರುವ ಸುಳಿವನ್ನು ನೀಡಿದ್ದಾರೆ. ಇದು ಅಭಿಮಾನಿಗಳ ಉತ್ಸಾಹಕ್ಕೆ ಕಾರಣವಾಗಿದೆ.
‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕತೆ ಇದೆ. ‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆಂಬುದು ಗುಟ್ಟೇನೂ ಅಲ್ಲ. ಆದರೆ ಸಿನಿಮಾನಲ್ಲಿ ಅವರು ರಾಜಕಾರಣಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕದ ಸಿಎಂ ಸಹ ಆಗಿಬಿಟ್ಟಿದ್ದಾರೆ. ಸಿನಿಮಾ ಮೂಲಕ ಮನದಾಸೆಯನ್ನು ದರ್ಶನ್, ಅಭಿಮಾನಿಗಳ ಹಾಗೂ ರಾಜ್ಯದ ಜನರ ಮುಂದಿಟ್ಟಿದ್ದಾರೆ ಎಂಬ ಅನುಮಾನ ಮೂಡಿದೆ.
ತಮಿಳುನಾಡಿನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಟ ವಿಜಯ್ ಅವರ ಹೆಜ್ಜೆಯನ್ನೇ ದರ್ಶನ್ ಅನುಸರಿಸಿದ್ದಾರೆ. ವಿಜಯ್ ಸಹ ರಾಜಕೀಯಕ್ಕೆ ಎಂಟ್ರಿ ನೀಡುವ ಮೊದಲು ರಾಜಕೀಯ ವಿಷಯಗಳುಳ್ಳ ಸಿನಿಮಾಗಳಲ್ಲಿ ನಟಿಸಿದ್ದರು. ‘ಮರ್ಸೆಲ್’ ಇನ್ನಿತರೆ ಕೆಲವು ಸಿನಿಮಾಗಳಲ್ಲಿ ರಾಜಕೀಯ ಭಾಷಣಗಳನ್ನು ಸೇರಿಸಿದ್ದರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಟೀಕೆ ಮಾಡಿದ್ದರು. ತಮ್ಮ ರಾಜಕೀಯ ಅಜೆಂಡಾವನ್ನು ಸಿನಿಮಾಗಳಲ್ಲಿ ಸೇರಿಸಿದ್ದರು. ಆ ಮೂಲಕ ತಮ್ಮ ರಾಜಕೀಯ ಪ್ರವೇಶದ ಇಂಗಿತವನ್ನು ವ್ಯಕ್ತಪಡಿಸಿ ಬಳಿಕ ಒಮ್ಮೆಲೆ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ದರ್ಶನ್ ಸಹ ಅದೇ ಹಾದಿಯಲ್ಲಿ ಇದ್ದಂತೆ ತೋರುತ್ತಿದೆ.
‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ಪಾತ್ರ ಸಿಎಂ ಆಗಿರುವ ಬಗ್ಗೆ, ಅದರ ಹಿಂದಿನ ಅರ್ಥದ ಬಗ್ಗೆ ‘ರಾಜ್ಯಧರ್ಮ ಟಿವಿ’ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ದರ್ಶನ್ ಅವರ ಸಹೋದರ ದಿನಕರ್, ದರ್ಶನ್ ರಾಜಕೀಯಕ್ಕೆ ಬರಬಹುದು ಎಂಬರ್ಥದ ಉತ್ತರವನ್ನೇ ಪರೋಕ್ಷವಾಗಿ ನೀಡಿದ್ದಾರೆ. ರಾಜ್ಯಧರ್ಮ ಟಿವಿ ಜೊತೆಗೆ ಮಾತನಾಡಿರುವ ದಿನಕರ್ ತೂಗುದೀಪ, ‘ಅಭಿಮಾನಿಗಳು ಕೇಳಿದರೆ ಖಂಡಿತ ದರ್ಶನ್ ರಾಜಕೀಯಕ್ಕೆ ಬರುತ್ತಾರೆ’ ಎಂದಿದ್ದಾರೆ. ದರ್ಶನ್ ರಾಜಕೀಯಕ್ಕೆ ಬರುವುದು ಬೇಡ ಎಂದು ಅತ್ಯುತ್ಸಾಹಿ ಅಭಿಮಾನಿ ದಂಡು ಹೇಳುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ದರ್ಶನ್ ಪ್ರಸ್ತುತ ಜೈಲಿನಲ್ಲಿದ್ದಾರೆ. ಅವರು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವುದು ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ. ಇಂಥಹಾ ಗಂಭೀರ ಆರೋಪವುಳ್ಳ ವ್ಯಕ್ತಿ ರಾಜಕೀಯಕ್ಕೆ ಬಂದರೆ ಜನ ಅವರಿಗೆ ಮತ ನೀಡುತ್ತಾರೆಯೇ, ಕೇವಲ ಸ್ಟಾರ್ ಎಂಬ ಕಾರಣಕ್ಕೆ ಜನ ಓಟು ಹಾಕುತ್ತಾರೆಯೇ? ಕರ್ನಾಟಕದಲ್ಲಿ ಕೇವಲ ಜನಪ್ರಿಯತೆ ಆಧಾರದಲ್ಲಿ ಚುನಾವಣೆ ಗೆದ್ದ ನಟ-ನಟಿಯರು ವಿರಳದಲ್ಲಿ ವಿರಳ. ಹಿಂದಿನ ಕೆಲ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ದರ್ಶನ್ ಪ್ರಚಾರ ಮಾಡಿದ ಕೆಲವರು ಸೋತ ಉದಾಹರಣೆಯೂ ಇದೆ. ದರ್ಶನ್ಗೆ ದೊಡ್ಡ ಅಭಿಮಾನಿ ವರ್ಗ ಇದೆ. ಆದರೆ ಅದೆಲ್ಲ ಓಟಾಗಿ ಪರಿವರ್ತನೆ ಆಗುತ್ತದೆಯೇ? ಕಾದು ನೋಡಬೇಕಿದೆ.



