Saturday, April 19, 2025
Google search engine

Homeಸ್ಥಳೀಯನಾಗರಹೊಳೆಯ ಆದಿವಾಸಿ ಜಮ್ಮ-ಪಾಳೇ ಹಕ್ಕು ಸ್ಥಾಪನಾ ಸಮಿತಿಯ ವಿವಿಧ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದನೆ: ತಿರಸ್ಕೃತಗೊಂಡಿರುವ ೩೨೦...

ನಾಗರಹೊಳೆಯ ಆದಿವಾಸಿ ಜಮ್ಮ-ಪಾಳೇ ಹಕ್ಕು ಸ್ಥಾಪನಾ ಸಮಿತಿಯ ವಿವಿಧ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದನೆ: ತಿರಸ್ಕೃತಗೊಂಡಿರುವ ೩೨೦ ಅರ್ಜಿ ಮರು ಪರಿಶೀಲನೆಗೆ ಡಾ.ಬಿ.ಸಿ.ಸತೀಶ ಸೂಚನೆ


ಮಡಿಕೇರಿ : ನಾಗರಹೊಳೆಯ ಆದಿವಾಸಿ ಜಮ್ಮ-ಪಾಳೇ ಹಕ್ಕು ಸ್ಥಾಪನಾ ಸಮಿತಿ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದು, ಈ ಹಿನ್ನೆಲೆ ಅರಣ್ಯ ಹಕ್ಕು ಕಾಯ್ದೆಯಡಿ ಮತ್ತೊಮ್ಮೆ ಪರಿಶೀಲಿಸಲು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹಾಡಿಗಳ ಆದಿವಾಸಿ ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹಾಡಿಯ ಜನರು ವಾಸಕ್ಕಾಗಿ ಮಾತ್ರ ಅರಣ್ಯ ಹಕ್ಕು ಪತ್ರ ನೀಡಿದ್ದು, ವ್ಯವಸಾಯಕ್ಕೆ ಭೂಮಿ ನೀಡಿಲ್ಲ. ಆದ್ದರಿಂದ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಹಕ್ಕು ಕಾಯ್ದೆಯಡಿ ಉಳುಮೆ ಮಾಡುತ್ತಿರುವ ಕೃಷಿ ಭೂಮಿಯನ್ನು ಆದಿವಾಸಿಗಳಿಗೆ ನೀಡಬೇಕು ಎಂಬುದು ಆಗ್ರಹವಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿ ಎರಡು ಬಾರಿ ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ತಿರಸ್ಕೃತವಾಗಿರುವ ವೈಯಕ್ತಿಕ ೩೨೦ ಅರ್ಜಿಗಳನ್ನು ಪುನರ್ ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.
ನಾಗರಹೊಳೆ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ ೧೫೬೭ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ ೧೨೪೭ ಅರ್ಜಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕು ಪತ್ರ ನೀಡಲಾಗಿದೆ. ಉಳಿದಂತೆ ೩೨೦ ಅರ್ಜಿಗಳು ಗ್ರಾಮ ಅರಣ್ಯ ಸಮಿತಿ ಸಭೆಯಲ್ಲಿ ಎರಡು ಬಾರಿ ತಿರಸ್ಕೃತಗೊಂಡಿದೆ. ಜೊತೆಗೆ ೧೯ ಸಮುದಾಯ ಹಕ್ಕುಗಳ ಅರ್ಜಿಯನ್ನು ಪುನರ್ ಪರಿಶೀಲಿಸಬೇಕಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹೊನ್ನೇಗೌಡ ಅವರು ಸಭೆಯ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಹೊಳೆ ವ್ಯಾಪ್ತಿಯ ಆದಿವಾಸಿ ಪ್ರಮುಖರಾದ ತಿಮ್ಮ ಅವರು ಅನುಸೂಚಿತ ಬುಡಕಟ್ಟು ಕಾಯ್ದೆಯಡಿ ಅರಣ್ಯ ಹಕ್ಕುಗಾಗಿ ೨೦೦೯ ರಿಂದ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೆ ಇದುವರೆಗೆ ಯಾವುದೇ ಸೌಲಭ್ಯಗಳು ತಲುಪಿಲ್ಲ ಎಂದು ನೋವು ವ್ಯಕ್ತಪಡಿಸಿದರು.
ನಾಗರಹೊಳೆ ವ್ಯಾಪ್ತಿಯಲ್ಲಿ ಹಲವು ದೇವಸ್ಥಾನಗಳಿವೆ. ಅಲ್ಲಿನ ಆದಿವಾಸಿಗಳು ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ಕಟ್ಟಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಇದಕ್ಕೂ ಅವಕಾಶ ನೀಡುತ್ತಿಲ್ಲ. ಆದ್ದರಿಂದ ನಾಗರಹೊಳೆ ವ್ಯಾಪ್ತಿಯ ಆದಿವಾಸಿಗಳ ಕೃಷಿ ಮಾಡಿಕೊಂಡಿರುವ ಭೂಮಿ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.
ಸೋಮಯ್ಯ ಅವರು ಮಾತನಾಡಿ ನಾಗರಹೊಳೆ ವ್ಯಾಪ್ತಿಯಲ್ಲಿನ ಆದಿವಾಸಿಗಳ ಅನುಭವದಲ್ಲಿರುವ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯವರು ಕಸಿದುಕೊಂಡಿದ್ದಾರೆ. ಇದರಿಂದಾಗಿ ಉದ್ಯೋಗವಿಲ್ಲದೆ ಬದುಕುವುದು ಕಷ್ಟವಾಗಿದೆ ಎಂದರು.
ಆದಿವಾಸಿ ಮುಖಂಡರಾದ ಶಿವು ಅವರು ಆದಿವಾಸಿಗಳು ವಾಸ ಮಾಡುತ್ತಿರುವ ಬಗ್ಗೆ ಎರಡು ಸಾಕ್ಷ್ಯಾಧಾರ ಒದಗಿಸಿದರೆ ಸಾಕಾಗುತ್ತದೆ. ಆ ನಿಟ್ಟಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿದಾರರಿಗೆ ಭೂಮಿ ಒದಗಿಸಬೇಕು ಎಂದು ಮನವಿ ಮಾಡಿದರು.
?ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕರಾದ ಹರ್ಷಕುಮಾರ್ ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಗೆ ಅಗತ್ಯ ಸಾಕ್ಷ್ಯ ಆಧಾರಗಳನ್ನು ಒದಗಿಸಬೇಕು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.?
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾತನಾಡಿ ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆಗೆ ಅರಣ್ಯಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವವರನ್ನು ಆಹ್ವಾನಿಸಬೇಕು ಎಂದು ಸಲಹೆ ಮಾಡಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಹಾಗೂ ಅರ್ಜಿದಾರರನ್ನು ಪತ್ರದ ಮೂಲಕ ಸಭಾ ಆಹ್ವಾನ ನೀಡಬೇಕು. ಈ ಸಂಬಂಧ ೧೫ ದಿನ ಕಾಲಾವಕಾಶ ನೀಡಬೇಕು ಎಂದು ಸೂಚಿಸಿದರು.
ಈ ಸಂಬಂಧ ಒಂದು ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅಗತ್ಯ ಸೌಲಭ್ಯ ನೀಡಬೇಕು ಎಂದು ಡಾ.ಎಸ್.ಆಕಾಶ್ ಅವರು ತಾಕೀತು ಮಾಡಿದರು.
ಐಟಿಡಿಪಿ ಇಲಾಖೆಯ ತಾಲ್ಲೂಕು ಅಧಿಕಾರಿ ಗುರುಶಾಂತಪ್ಪ ಅವರು ಹತ್ತೂರುಕೊಲ್ಲಿ ಹಾಡಿ ವ್ಯಾಪ್ತಿಯಲ್ಲಿನ ಆದಿವಾಸಿ ೪೪ ಕುಟುಂಬದವರ ಅರ್ಜಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಕೃಷಿ ಭೂಮಿಗಾಗಿ ಮನವಿ ಸಲ್ಲಿಸಿದ್ದಾರೆ ಎಂದರು.
?ಈ ಸಂದರ್ಭದಲ್ಲಿ ಮಾತನಾಡಿದ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಎಸ್.ಹೊನ್ನೇಗೌಡ ಅವರು ಹಾಡಿ ಜನರಿಗೆ ಅರಣ್ಯ ಹಕ್ಕು ಕಾಯ್ದೆ ಬಗ್ಗೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಿ ಮಾಹಿತಿ ನೀಡಲಾಗುವುದು ಎಂದರು.?
ಆದಿವಾಸಿ ಜನರ ಬೇಡಿಕೆಗಳನ್ನು ಅರಣ್ಯ ಹಕ್ಕು ಕಾಯ್ದೆಯಡಿ ಈಡೇರಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಅವರು ತಿಳಿಸಿದರು.

RELATED ARTICLES
- Advertisment -
Google search engine

Most Popular