Friday, April 4, 2025
Google search engine

Homeಬ್ರೇಕಿಂಗ್ ನ್ಯೂಸ್ನಾಗರಹೊಳೆ ಜಿಂಕೆ ಕೊಂಬಿಗೆ ಸಿಕ್ಕಿಬಿದ್ದ ಮೀನಿನ ಬಲೆ ಸಫಾರಿ ವೇಳೆ ಕ್ಯಾಮೆರಾದಲ್ಲಿ ಸೆರೆ

ನಾಗರಹೊಳೆ ಜಿಂಕೆ ಕೊಂಬಿಗೆ ಸಿಕ್ಕಿಬಿದ್ದ ಮೀನಿನ ಬಲೆ ಸಫಾರಿ ವೇಳೆ ಕ್ಯಾಮೆರಾದಲ್ಲಿ ಸೆರೆ

 

 

ಮೈಸೂರು: ನಾಗರಹೊಳೆಯ ಕಾಕನಕೋಟೆ ಸಫಾರಿ ವೇಳೆ ಜಿಂಕೆಯೊಂದು ತನ್ನ ಕೊಂಬಿಗೆ ಮೀನಿನ ಬಲೆಯನ್ನು ಸಿಕ್ಕಿಸಿಕೊಂಡು ಬಿಡಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯವೊಂದು ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ಆ ಜಿಂಕೆಯನ್ನು ಪತ್ತೆಹಚ್ಚಿ ಅದರ ಕೊಂಬಿಗೆ ಸಿಲುಕಿದ ಬಲೆ ಬಿಡಿಸುವಂತೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಕನಕೋಟೆಯಲ್ಲಿ ಶುಕ್ರವಾರ ಸಂಜೆ ಸಫಾರಿಯ ವೇಳೆ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಜಿಂಕೆಯೊಂದು ತನ್ನ ಕೊಂಬಿಗೆ ಮೀನಿನ ಬಲೆ ಸಿಕ್ಕಿಸಿಕೊಂಡು ಬಿಡಿಸಿಕೊಳ್ಳಲು ಪರದಾಡುತ್ತಿರುವುದನ್ನು ಪ್ರವಾಸಿಗರು ಗುರುತಿಸಿದ್ದಾರೆ. ನಾಗರಹೊಳೆ ಮತ್ತು ಬಂಡೀಪುರ ಕಾಡಂಚಿನ ಭಾಗಗಳಲ್ಲಿ ಕಬಿನಿ ಹಿನ್ನೀರಿಗೆ ಮೀನು ಹಿಡಿಯಲು ಆಗಾಗ್ಗೆ ಬಲೆ ಹಾಕುತ್ತಿರುತ್ತಾರೆ.

ಆದರೆ, ಕೆಲ ಬಾರಿ ಆ ಬಲೆಗಳು ಅಲ್ಲಲ್ಲಿ ವ್ಯರ್ಥವಾಗಿ ಬಿದ್ದಿದ್ದು, ನೀರು ಕಡಿಮೆಯಾದಂತೆಲ್ಲ ಅದು ದಡಕ್ಕೆ ಬಂದಿರುತ್ತದೆ. ಈ ವೇಳೆ, ಹಿನ್ನೀರಿನ ಪ್ರದೇಶಕ್ಕೆ ನೀರು ಕುಡಿಯಲು ಬರುವ ಕೆಲ ವನ್ಯಜೀವಿಗಳಿಗೆ ಈ ಬಲೆಗಳು ಕಂಟಕವಾಗಿದ್ದು, ಕೊಂಬು, ಕಾಲಿಗೆ ಕೆಲ ಬಾರಿ ಕುತ್ತಿಗೆಗೂ ಸಿಕ್ಕಿಕೊಳ್ಳಬಹುದಾಗಿದೆ. ಈ ರೀತಿ ದಡಕ್ಕೆ ಬಂದಿದ್ದ ಬಲೆಯೊಂದು ಜಿಂಕೆ ಕೊಂಬಿಗೆ ಸಿಲುಕಿಕೊಂಡಿದ್ದು, ಬಿಡಿಸಿಕೊಳ್ಳಲು ಜಿಂಕೆ ಪರದಾಡಿದೆ. ಪ್ರಾಣಿಗಳ ಜೀವಕ್ಕೆ ಕಂಟಕವಾಗಿರುವ ಈ ರೀತಿಯ ಬಲೆಗಳನ್ನು ಅರಣ್ಯ ಇಲಾಖೆಯೂ ಆಗಾಗ್ಗೆ ಗಸ್ತು ತಿರುಗುವ ಮೂಲಕ ತೆರವು ಮಾಡಬೇಕು ಎಂಬುದು ವನ್ಯಜೀವಿ ಪ್ರಿಯರ ಮಾತಾಗಿದೆ.

ಈ ಹಿಂದೆಯೂ ಈ ರೀತಿ ಬಲೆಗೆ ಸಿಲುಕಿಕೊಂಡು ಆನೆಯಂತಹ ಪ್ರಾಣಿಗಳೂ ಪರದಾಡಿರುವ ಉದಾಹರಣೆಗಳಿವೆ. ಕಳೆದ 2021 ರಲ್ಲಿಯೂ ನೀರು ಕುಡಿಯಲು ಬಂದ ಕಾಡಾನೆಯೊಂದು ಮೀನಿನ ಬಲೆಗೆ ಸಿಲುಕಿ ನೀರಿನಲ್ಲಿಯೇ ಕೆಲ ಗಂಟೆಗಳ ಕಾಲ ಸಿಲುಕಿತ್ತು. ಬಳಿಕ ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಸಹಾಯದಿಂದ ಕಾರ್ಯಾಚರಣೆ ನಡೆಸಿ ಆನೆಯನ್ನು ದಡ ಸೇರಿಸಲಾಯಿತು.

ಜಿಂಕೆ ಪತ್ತೆಗೆ ಕ್ರಮ : ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಜಿಂಕೆ ನೀರು ಕುಡಿಯಲು ಹೋದ ಸಂದರ್ಭದಲ್ಲಿ, ಅದರ ಕೊಂಬಿಗೆ ಮೀನಿನ ಬಲೆ ಸಿಕ್ಕಿಕೊಂಡಿರುವ ಮಾಹಿತಿ ಪಡೆದು, ಜಿಂಕೆ ಪತ್ತೆ ಮಾಡಲು ಕ್ರಮ ವಹಿಸಲಾಗುವುದು ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಅವರು ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular