ಮೈಸೂರು: ನಗರದ ಅರಸು ಮಂಡಳಿ ಸಂಘದಿಂದ ನಗರದಲ್ಲಿ ಭಾನುವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಮೆರವಣಿಗೆ ಆಯೋಜಿಸಲಾಗಿತ್ತು.
ತ್ಯಾಗರಾಜ ರಸ್ತೆಯ ಅರಸು ಮಂಡಳಿ ಭವನದಿಂದ ಆರಂಭವಾದ ಮೆರವಣಿಗೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿ, ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಸಂಘದ ಅಧ್ಯಕ್ಷ ಎಚ್.ಎಂ.ಟಿ. ಲಿಂಗರಾಜೇ ಅರಸ್ ಇತರರು ಇದ್ದರು.
ವಾಹನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವನ್ನಿರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ವೀರಗಾಸೆ, ನಾದಸ್ವರ, ಗಾರುಡಿ ಗೊಂಬೆ ಮುಂತಾದ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ತ್ಯಾಗರಾಜ ರಸ್ತೆಯಿಂದ ಆರಂಭವಾದ ಮೆರವಣಿಗೆಯು, ಚಾಮರಾಜ ಜೋಡಿ ರಸ್ತೆ, ಸರ್ಕಾರಿ ಮಹಾರಾಜ ಸಂಸ್ಕೃತ ಪಾಠಶಾಲೆ ಮೂಲಕ ಕೆ.ಆರ್. ವೃತ್ತದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಬಳಿ ಅಂತ್ಯಗೊಂಡಿತು.