ಮೈಸೂರು: ಬಿಲ್ಡರ್‍ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಶಾಖೆ ಹಾಗೂ ಮೈಸೂರು ಬಿಲ್ಡರ್ ಚಾರಿಟಬಲ್ ಟ್ರಸ್ಟ್, ಸಹಯೋಗದಲ್ಲಿ ವಿಶ್ವ ಪರಿಸರ ಮಾಸವನ್ನು ಜೂನ್ ತಿಂಗಳಾದ್ಯಂತ ಆಚರಿಸಲಾಗುತ್ತಿದ್ದು, ಜೂ.೧೦ ಮತ್ತು ೧೧ರಂದು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಹಾಗೂ ಇನ್ನಿತರ ಪರಿಸರ ಸ್ನೇಹಿ ವಸ್ತುಗಳ ಬಳಕೆ ಕುರಿತ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಬಿಎಐ ಮೈಸೂರು ಛೇರ್‍ಮನ್ ನಾಗರಾಜ ವಿ. ಬೈರಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರದರ್ಶನದಲ್ಲಿ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಪದಾರ್ಥಗಳು, ನವೀಕರಿಸಿದ ಉತ್ಪನ್ನಗಳು, ತಂತ್ರಜ್ಞಾನ, ಸಾವಯವ ಆಹಾರ ಪದಾರ್ಥಗಳು ಮತ್ತು ಮುಂತಾದ ಪರಿಸರ ಸ್ನೇಹಿ ಜೀವನಶೈಲಿ ಅನುಕರಣೀಯ ಉತ್ಪನ್ನಗಳು ಇರಲಿವೆ. ಸಾವಯವ ಗೊಬ್ಬರ ತಯಾರಿಕೆ ಪ್ರದರ್ಶನ, ರಾಸಾಯನಿಕ ರಹಿತ, ಶೌಚಾಲಯ ಶುದ್ಧೀಕರಣ ಪದಾರ್ಥಗಳು, ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಕೆಲವು ಉತ್ಸಾಹಿತ ವ್ಯಕ್ತಿಗಳಿಂದ ಪರಿಸರ ಸ್ನೇಹಿ ತಂತ್ರಜ್ಞಾನ ಆವಿಷ್ಕಾರಗಳು ವಸ್ತು ಪ್ರದರ್ಶನದ ಭಾಗವಾಗಿ ಆಕರ್ಷಣೆ ಹೆಚ್ಚಿಸಲಿವೆ ಎಂದರು.
ನವೀಕರಿಸಿದ ಮರದ ಉತ್ಪನ್ನಗಳು, ಪರಿಸರಸ್ನೇಹಿ ಕಟ್ಟಡ ತಂತ್ರಜ್ಞಾನ ಮತ್ತು ಉತ್ಪನ್ನಗಳು, ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟ್‌ಗಳು, ಮೈಕೋಗ್ರಿಡ್ ಕುಡಿಯುವ ನೀರಿನ ಸಂಸ್ಕರಣೆಯ ವಿಧಾನಗಳು ಮತ್ತು ಉತ್ಪನ್ನಗಳು, ಕೊಳಚೆ ನೀರಿನ ಸಂಸ್ಕರಿಸಿದ ಮತ್ತು ಮರು ಉಪಯೋಗ-ನವೀಕರಿಸಬಹುದಾದ ಇಂಧನ ಮೂಲಗಳ ಮಾಹಿತಿ, ಕರಕಶುಲ ವಸ್ತುಗಳು, ವಿದ್ಯುತ್ ಚಾಲಿತ ವಾಹನ, ಮಠದ ಪರ್ಯಾಯ ಉತ್ಪನ್ನಗಳು, ಬೀಜಗಳು-ಗಿಡಗಳ ನರ್ಸರಿಗಳು, ಸಾವಯವ ಆಹಾರ ಪದಾರ್ಥಗಳು, ಹಣ್ಣು ಮತ್ತು ತರಕಾರಿಗಳನ್ನು ಸಹಾ ವೀಕ್ಷಿಸಬಹುದಾಗಿದೆ.
ಜೂ.೧೦ರಂದು ಬೆಳಗ್ಗೆ ೧೦ ಗಂಟೆಗೆ ವಸ್ತುಪ್ರದರ್ಶನದ ಉದ್ಘಾಟನೆಯಾಗಲಿದ್ದು, ಬಿಎಐ ರಾಜ್ಯಾಧ್ಯಕ್ಷ ಶ್ರೀನಿವಾಸ ರೆಡ್ಡಿ ಇನ್ನಿತರ ಗಣ್ಯರು ಹಾಜರಿರುವರು. ಎರಡು ದಿನಗಳ ಈ ವಸ್ತು ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಇಲ್ಲಿ ೨೦ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ ಎಂದು ಹೇಳಿದರು. ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.