ಮೈಸೂರು: ಸರ್ಕಾರ ವಿದ್ಯಾರ್ಥಿ ನಿಲಯದ ಶಿಕ್ಷಣಕ್ಕಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದ್ದು, ನೀವು ಚೆನ್ನಾಗಿ ಓದಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಕೈಯಲ್ಲಿಯೇ ಇದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ತಿಳಿಸಿದರು.
ಬೋಗಾದಿಯಲ್ಲಿರುವ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಟ್ಟಿನ ಕಪ್ ಬಳಕೆ, ಮಹಿಳಾ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೀವೆಲ್ಲರೂ ಕಷ್ಟದಿಂದ, ಬಡತನದಿಂದ ದೂರದ ಊರುಗಳಿಂದ ಬಂದಿದ್ದೀರಿ. ನಿಮ್ಮ ತಂದೆ ತಾಯಂದಿರು ನಿಮ್ಮ ಭವಿಷ್ಯ ರೂಪಿಸಲು ಹಾಸ್ಟೆಲ್‌ಗಳಿಗೆ ಕಳಿಸಿದ್ದಾರೆ. ಆದ್ದರಿಂದ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ. ನೀವೆಲ್ಲರೂ ಚೆನ್ನಾಗಿ ಓದಬೇಕು. ಈ ಕಾರ್ಯಕ್ರಮದ ಸದುಪಯೋಗವನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ಸುಮಾ ಮಾತನಾಡಿ, ವಿದ್ಯಾರ್ಥಿನಿಯರು ಮುಟ್ಟಿನ ಕಪ್ ಹೇಗೆ ಬಳಸಬೇಕು. ಅದರಿಂದ ಆಗುವ ಅನುಕೂಲ ಹಾಗೂ ಪಿಸಿಒಡಿ ಸಮಸ್ಯೆ ಬಗ್ಗೆ ವಿವರವಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಮಾತನಾಡಿ, ಹೆಣ್ಣು ಈ ದೇಶದ ದೊಡ್ಡ ಶಕ್ತಿಯಾಗಿದ್ದು, ಹಳ್ಳಿಗಳನ್ನು ಬಿಟ್ಟು ಪಟ್ಟಣಕ್ಕೆ ಬಂದಿದ್ದೀರಿ. ಮುಟ್ಟು ಹೆಣ್ಣಿನ ಜೀವನದ ಜೈವಿಕ ಪ್ರಕ್ರಿಯೆಯಾಗಿದ್ದು, ಇದರ ಬಗ್ಗೆ ಯಾರೂ ಸಹ ಮುಜುಗರ ನಾಚಿಕೆ ಪಟ್ಟುಕೊಳ್ಳಬೇಡಿ. ಚೆನ್ನಾಗಿ ಓದಿ. ಈ ದೇಶ ಕಟ್ಟು ಪ್ರಜೆಗಳಾಗಿ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದರು.
ಸಮಾರಂಭದಲ್ಲಿ ಪ್ರೊ.ರೇಖಾ, ಸಹಾಯಕ ನಿರ್ದೇಶಕ ಸಿದ್ದಲಿಂಗು, ಹಿರಿಯ ನಿಲಯಪಾಲಕ ಪವಿತ್ರ, ಸರೋಜ, ಅನುಷ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು.