ಮೈಸೂರು: ಎಫ್‌ಡಿಎ, ಎಸ್‌ಡಿಎ, ಪಿಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳು ನಿರಂತರ ಪರಿಶ್ರಮದಿಂದ, ಪಠ್ಯಪುಸ್ತಕಗಳನ್ನು ಓದುವ ಮೂಲಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ವಿದ್ಯಾಥಿಗಳಿಗೆ ಸಲಹೆ ನೀಡಿದರು.
ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಎಫ್‌ಡಿಎ ಹಾಗೂ ಎಸ್‌ಡಿಎ ಮತ್ತು ಪಿಸಿ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನಬುತ್ತಿ ತರಬೇತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡರ ಸೇವೆಯನ್ನು ಸಮಾಜ ಅತ್ಯಂತ ತುಂಬು ಹೃದಯದಿಂದ ನೆನೆಯುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಹಣ ಸಂಪಾದನೆಯ ಮಾರ್ಗ ಅನುಸರಿಸದೇ ಕಳೆದ ೩೫ ವರ್ಷಗಳಿಂದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಆಯೋಜನೆ ಮಾಡುತ್ತಿರುವ, ಜ್ಞಾನಬುತ್ತಿಯ ಸೇವೆ ಅನನ್ಯವಾದುದು ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಯಾವುದೇ ಕಾರಣದಿಂದಲೂ ಎದೆಗುಂದದೆ ಕಡಿಮೆ ಅವಧಿಯಲ್ಲಿ ಉದ್ಯೋಗ ಸಂಪಾದನೆ ಮಾಡುತ್ತೇನೆ ಎಂಬ ಆಕಾಂಕ್ಷೆ ಇಟ್ಟುಕೊಳ್ಳದೆ ಯಾವುದಾದರೂ ಒಂದು ಉದ್ಯೋಗ ಪಡೆದೇ ಪಡೆಯುತ್ತೇನೆ ಎಂಬ ಛಲದಿಂದ ನಿರಂತರ ಕಠಿಣ ಪರಿಶ್ರಮ ಹಾಕಿದರೆ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವುದೇ ಅಡ್ಡದಾರಿಯಿಂದ ಯಶಸ್ಸು ಸಾಧ್ಯವಿಲ್ಲದೆಂದು ತಿಳಿಸುತ್ತಾ, ಗೈಡುಗಳ ಬದಲಾಗಿ ಪಠ್ಯಪುಸ್ತಕಕ್ಕೆ ಆದ್ಯತೆ ನೀಡಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಾ ಅಧ್ಯಯನ ಮಾಡಬೇಕೆಂದು ತಿಳಿಸಿದರು.
ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಪುಸ್ತಕಗಳನ್ನು ಓದದೆ ವಿವಿಧ ಕನ್ನಡ ಲೇಖಕರ ಉತ್ತಮ ಪುಸ್ತಕಗಳನ್ನು ಓದುವ ಜತೆಗೆ ಮನಸ್ಸನ್ನು ಸಂತೋಷಪಡಿಸಿಕೊಳ್ಳುತ್ತಾ ಮುಂದುವರಿಯಬೇಕೆಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಆರಂಭಿಸುವ ಅಭ್ಯರ್ಥಿಗಳಿಗೆ ಮೊದ ಮೊದಲು ಕೋಚಿಂಗ್ ತುಂಬಾ ಉಪಯೋಗವಾಗುತ್ತದೆ. ಕೋಚಿಂಗ್ ಪಡೆದ ನಂತರ ತಾವು ತಮ್ಮ ಸ್ವ ಅಧ್ಯಯನದ ಮೂಲಕ ಯಶಸ್ಸು ಪಡೆಯಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ, ಅಖಿಲ ಭಾರತ ವಯಸ್ಕರ ಶಿಕ್ಷಣ ಪರಿಷತ್ತಿನ ನಿರ್ದೇಶಕ ವೈ.ಎನ್.ಶಂಕರೇಗೌಡ ವಹಿಸಿದ್ದರು. ಕಾರ್ಯದರ್ಶಿ ಹೆಚ್.ಬಾಲಕೃಷ್ಣ, ಜೈನಹಳ್ಳಿ ಸತ್ಯನಾರಾಯಣಗೌಡ, ಡಾ.ನಾಗಚಾರಿ, ಡಾ.ಉಮೇಶ್ ಬೇವಿನಹಳ್ಳಿ, ಡಾ.ಹೇಮಚಂದ್ರ, ಡಾ.ಕೃಷ್ಣಕುಮಾರ್, ಕಿರಣ್ ಕೌಶಿಕ್, ಉಮಾ, ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು.