ಮೈಸೂರು: ನಗರದ ಹೃದಯಭಾಗದಲ್ಲಿ ಹೆಚ್ಚಾಗುತ್ತಿದ್ದ ವಾಹನದಟ್ಟಣೆ, ಪಾರ್ಕಿಂಗ್ ಸಮಸ್ಯೆ ತಡೆಯಲು ಮುಂದಾಗಿರುವ ಮಹಾನಗರ ಪಾಲಿಕೆ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಶುಕ್ರವಾರ ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿದೆ. ಈ ಸಮಸ್ಯೆ ಪರಿಹರಿಸಲು ನಗರದ ದೇವರಾಜ ಅರಸು ರಸ್ತೆ, ಸಯ್ಯಾಜಿ ರಾವ್ ರಸ್ತೆ, ಅಶೋಕ ರಸ್ತೆ ಹಾಗೂ ಪುರಭವನದಲ್ಲಿ ಪ್ರಾಯೋಗಿಕವಾಗಿ ಪೇ ಆಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ಮುಂದಾಗಿದೆ. ಮೊದಲ ಹಂತದಲ್ಲಿ ನಾಲ್ಕು ಕಡೆಗಳಲ್ಲಿ ಪ್ರಾಯೋಗಿಕವಾಗಿ ಪೇ ಆಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಿ ಸಾಧಕ ಬಾಧಕ ನೋಡಿಕೊಂಡು ಎರಡನೇ ಹಂತದಲ್ಲಿ ವಿನೋಬಾ ರಸ್ತೆ, ಹರ್ಷ ರಸ್ತೆ, ಧನ್ವಂತ್ರಿ ರಸ್ತೆಯಲ್ಲಿ ಪೇ ಆಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ತರುವುದು ಸೂಕ್ತ ಎಂದು ಸಭೆ ಅಭಿಪ್ರಾಯಪಟ್ಟಿತು.
ನಗರದ ದೇವರಾಜ ಅರಸು ರಸ್ತೆ, ಸಯ್ಯಾಜಿ ರಾವ್ ರಸ್ತೆ, ಅಶೋಕ ರಸ್ತೆ ಹಾಗೂ ಪುರಭವನದಲ್ಲಿ ದ್ವಿ ಚಕ್ರ ವಾಹನಗಳಿಗೆ ಮೊದಲ ಎರಡು ಗಂಟೆಗೆ ೧೦ ರೂ, ನಂತರದ ಪ್ರತಿ ಗಂಟೆಗೆ ೧೦ ರೂ. ಶುಲ್ಕ, ನಾಲ್ಕು ಚಕ್ರದ ವಾಹನಗಳಿಗೆ ಮೊದಲ ಎರಡು ಗಂಟೆಗೆ ೩೦ ರೂ, ನಂತರದ ಪ್ರತಿ ಗಂಟೆಗೆ ೨೦ ರೂ. ಶುಲ್ಕ ವಿಧಿಸಲು ಸಭೆ ಒಪ್ಪಿಗೆ ಸೂಚಿಸಿತು.
ಸೂಯೇಜ್‌ಫಾರ್ಮ್‌ಗೆ ಹೊಂದಿಕೊಂಡಿರುವ ವೀರಶೈವ ರುದ್ರಭೂಮಿ ಜಾಗ ಕಿರಿದಾಗಿರುವ ಹಿನ್ನೆಲೆಯಲ್ಲಿ ಸೂಯೇಜ್ ಫಾರ್ಮ್‌ಗೆ ಸೇರಿದ ೨ ಎಕರೆ ಜಾಗವನ್ನು ವೀರಶೈವ ರುದ್ರಭೂಮಿಗೆ ನೀಡಲು ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರದ ಒಪ್ಪಿಗೆಗೆ ಕಳುಹಿಸಲು ತೀರ್ಮಾನಿಸಲಾಯಿತು. ಈ ನಿರ್ಧಾರಕ್ಕೆ ಜೆಡಿಎಸ್‌ನ ಪ್ರೇಮಾ ಶಂಕರೇಗೌಡ, ಆರ್.ನಾಗರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಶೋಭಾ ಸುನಿಲ್ ಹೊರತು ಪಡಿಸಿ ಉಳಿದೆಲ್ಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಗೋವುಗಳಿಗೆ ಮೇವು ಬೆಳೆಯಲು ಮೈಸೂರು ಮಹಾರಾಜರು ಮೀಸಲಿಟ್ಟ ಜಾಗವನ್ನು ಅನ್ಯ ಉzಶಕ್ಕೆ ಬಳಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸದಸ್ಯರ ಮನವೊಲಿಸಿದ ಮೇಯರ್ ಶಿವಕುಮಾರ್ ಹಾಗೂ ಶಾಸಕ ಟಿ.ಎಸ್. ಶ್ರೀವತ್ಸ, ಇದೇ ರೀತಿಯ ಪ್ರಸ್ತಾವನೆ ಬೇರೆ ಸಮುದಾಯಗಳಿಂದ ಬಂದರೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಜಾಗ ಮಂಜೂರು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ನಿಯಮ ಪ್ರಕಾರ ವಿವಿಧ ಸಮಿತಿಗಳ ಚುನಾವಣೆಯನ್ನು ಮೇಯರ್ ನಡೆಸುತ್ತಿಲ್ಲವೆಂದು ಕಾಂಗ್ರೆಸ್ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಟೌನ್ ಹಾಲ್ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಚುನಾವಣಾ ಪ್ರಕ್ರಿಯೆಯನ್ನು ಮೇಯರ್ ಶಿವಕುಮಾರ್ ರದ್ದು ಪಡಿಸಿದರು.
ನಗರ ಪಾಲಿಕೆ ಸದಸ್ಯರು ಅನಾರೋಗ್ಯಪೀಡಿತರಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರೆ ಅಂತಹ ಸದಸ್ಯರ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದ ಭರಿಸಲು ಸಭೆ ಒಪ್ಪಿಗೆ ಸೂಚಿಸಿತು. ೧ ಲಕ್ಷ ರೂ.ವರೆಗಿನ ಚಿಕಿತ್ಸೆಗೆ ಅರ್ಜಿ ಸಲ್ಲಿಸಿದರೆ ತಕ್ಷಣ ಅನುಮೋದನೆ ನೀಡಲಾಗು ವುದು. ೧ ಲಕ್ಷ ರೂ.ಮೇಲ್ಪಟ್ಟ ಚಿಕಿತ್ಸಾ ವೆಚ್ಚಕ್ಕೆ ಕೌನ್ಸಿಲ್ ಸಭೆಯ ಒಪ್ಪಿಗೆ ಪಡೆದು ಚಿಕಿತ್ಸಾ ವೆಚ್ಚ ಮಂಜೂರು ಮಾಡಲು ತೀರ್ಮಾನಿಸಲಾಯಿತು.
ನಗರದ ರಾಮಾನುಜ ರಸ್ತೆಯ ೨ನೇ ಅಡ್ಡ ರಸ್ತೆಯಲ್ಲಿ ನಾಲ್ಕು ದುಸ್ಥಿತಿಯಲ್ಲಿರುವ ಕಟ್ಟಡಗಳಿದ್ದು, ಈ ಕಟ್ಟಡಗಳನ್ನು ತೆರವುಗೊಳಿಸಲು ೨೦-೧೨-೨೦೨೧ ರಂದು ಪಾಲಿಕೆ ನಿರ್ದೇಶನ ನೀಡಿದರೂ ಕ್ರಮ ವಹಿಸದ ಅಧಿಕಾರಿ ವಿರುದ್ಧ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಮೇಯರ್ ನಿರ್ದೇಶನ ನೀಡಿದರು. ಸದರಿ ಕಟ್ಟಡಗಳನ್ನು ಒಂದುವಾರದೊಳಗೆ ತೆರವುಗೊಳಿಸಲು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಸೂಚಿಸಿದರು.
ನಗರದಲ್ಲಿ ಸಾಕಷ್ಟು ಶೌಚಗೃಹಗಳು ದುಸ್ಥಿತಿಯಲ್ಲಿದ್ದು, ಅವುಗಳ ದುರಸ್ತಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಹಾಗೂ ಟೆಂಡರ್ ಅವಧಿ ಮುಗಿದಿರುವ ಶೌಚಗೃಹಗಳಿಗೆ ಸಂಬಂಧಿಸಿದಂತೆ ಕೂಡಲೇ ಟೆಂಡರ್ ಕರೆಯಬೇಕು. ಜೂ.೨೭ ರಂದು ಮತ್ತೊಂದು ಕೌನ್ಸಿಲ್ ಸಭೆ ನಡೆಸಲಾಗುವುದು, ಅಷ್ಟರೊಳಗೆ ಕ್ರಮ ಕೈಗೊಂಡಿರುವ ವರದಿ ನೀಡದೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಶಿವಕುಮಾರ್ ಎಚ್ಚರಿಸಿದರು.
ನಗರದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಮನಬಂದಂತೆ ಯುಜಿ ಕೇಬಲ್ ಅಳವಡಿಸಿದ್ದು, ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಅಪಾಯ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸೆಸ್ಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾ ಯಿತು. ಸಭೆಯಲ್ಲಿ ಉಪ ಮೇಯರ್ ಡಾ.ಜಿ. ರೂಪಾ ಇದ್ದರು.
ವೀಳ್ಯದೆಲೆ ಬೆಳೆಗಾರರಿಗೆ ೫ ಗುಂಟೆ ವೀಳ್ಯದೆಲೆ ಬೆಳೆಗಾರರಿಗೆ ಸೂಯೇಜ್ ಫಾರ್ಮ್‌ನಲ್ಲಿ ವೀಳ್ಯದೆಲೆ ಬೆಳೆಯಲು ತಲಾ ೫ ಗುಂಟೆ ಜಾಗ ನೀಡಲು ಸಭೆ ಒಪ್ಪಿಗೆ ಸೂಚಿಸಿತು. ಮಳಲವಾಡಿ ಗ್ರಾಮದ ಸರ್ವೇ ನಂ.೧ ರಿಂದ ೨೩, ೧೯೯, ೨೦೯, ೨೧೦ರ ಒಟ್ಟು ೫೭ ಎಕರೆ ಜಮೀನನ್ನು ಮುಡಾ (ಅಂದಿನ ಸಿಐಟಿಬಿ) ಸರಸ್ವತಿಪುರಂ, ತೊಣಚಿಕೊಪ್ಪಲು, ಜಯನಗರ ಬಡಾವಣೆ ನಿರ್ಮಾಣಕ್ಕೆ ೧೯೭೯ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿತ್ತು. ಭೂಮಿ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಲಾಯಿತು. ಆದರೆ, ವೀಳ್ಯದೆಲೆ ತೋಟವನ್ನು ಗುತ್ತಿಗೆ ಪಡೆದು ವೀಳ್ಯದೆಲೆ ಬೆಳೆಯುತ್ತಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದರು. ಹಾಗಾಗಿ ಮಾನವೀಯ ನೆಲೆಗಟ್ಟಿನಲ್ಲಿ ೨೪೫ ಜನ ಪರಿಶಿಷ್ಟ ಜಾತಿಗೆ ಸೇರಿದ ವೀಳ್ಯದೆಲೆ ಬೆಳೆಗಾರರಿಗೆ ೫ ಗುಂಟೆ ಜಾಗ ನೀಡಲು ೨೦೧೮ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಕುರಿತು ಅರ್ಜಿ ಆಹ್ವಾನಿಸಿ ಕ್ರಮಬದ್ಧವಾಗಿದ್ದ ೪೬ ಅರ್ಜಿದಾ ರರಿಗೆ ಇದೀಗ ಜಾಗ ಮಂಜೂರಾತಿಗೆ ಕೌನ್ಸಿಲ್‌ನಲ್ಲಿ ಒಪ್ಪಿಗೆ ಸೂಚಿಸಲಾಯಿತು.
