Friday, April 4, 2025
Google search engine

Homeಬ್ರೇಕಿಂಗ್ ನ್ಯೂಸ್ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯ ರಸ್ತೆಯಲ್ಲೇ ರಾಶಿರಾಶಿ ಕಸ

ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯ ರಸ್ತೆಯಲ್ಲೇ ರಾಶಿರಾಶಿ ಕಸ

ಪಿರಿಯಾಪಟ್ಟಣ: ಪಟ್ಟಣದ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಕಸದ ರಾಶಿ ತಾಂಡವಾಡುತ್ತಿದ್ದು, ತ್ಯಾಜ್ಯದ ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವುದರ ಜೊತೆಗೆ ಮಾರಕ ರೋಗದ ಭೀತಿಯಿಂದ ಪುರಸಭಾ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.
ಪಟ್ಟಣದ ಬಹುತೇಕ ಕಡೆಗಳ ಹೋಟೆಲ್ ಮತ್ತು ಬಾರುಗಳಲ್ಲಿನ ತ್ಯಾಜ್ಯವನ್ನು ನಿರ್ದಿಷ್ಟ ಸ್ಥಳದಲ್ಲಿ ಹಾಕದೆ ರಾತ್ರಿ ವ್ಯಾಪಾರ ವಹಿವಾಟು ಮುಗಿದ ನಂತರ ತ್ಯಾಜ್ಯಗಳನ್ನು ಮನಬಂದಂತೆ ಎಲ್ಲೆಂದರಲ್ಲಿ ತಂದು ಸುರಿಯುತ್ತಿದ್ದಾರೆ. ಇದರಿಂದ ಮದ್ಯದ ವಾಸನೆ ಜತೆಗೆ ಇತರೆ ತ್ಯಾಜ್ಯದ ದುರ್ವಾಸನೆ ಬೀದಿ ಬೀದಿಗಳಿಗೆ ಆವರಿಸುತ್ತಿದೆ. ಇದರಿಂದ ಹಗಲು ರಾತ್ರಿ ಭಯಾನಕ ಸೊಳ್ಳೆ ಮತ್ತು ನೋಣಗಳ ಉಪಟಳ ಹೆಚ್ಚಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಎಲ್ಲೆಡೆ ಕಸದ ರಾಶಿ, ಮೂಗು ಮುಚ್ಚಿ ಓಡಾಡುವ ದುಸ್ಥಿತಿ: ಪಿರಿಯಾಪಟ್ಟಣ ನಗರ ವ್ಯಾಪ್ತಿಯು ಜನ ದಟ್ಟಣೆಯಿಂದ ಕೂಡಿದ್ದು ಇಲ್ಲಿನ ಹೊಟೇಲ್, ಬಾರ್ ಮತ್ತು ರೆಟ್ಸೋರೆಂಟ್ , ಕೋಳಿ ಅಂಗಡಿ ಹಾಗೂ ಮನೆಗಳ ತ್ಯಾಜ್ಯವನ್ನು ಪಟ್ಟಣದ ಬಿ.ಎಂ.ರಸ್ತೆಯ ಉಪ್ಪಾರಗೇರಿಯ ಬಳಿಯ ದೊಡ್ಡಕೆರೆ, ಅರಸನ ಕೆರೆ, ಮಸಣಿಕಮ್ಮ ದೇವಾಲಯದ ಬಳಿ ಇರುವ ನೀರು ಹರಿಯುವ ರಾಜ ಕಾಲುವೆ ಸೇರಿದಂತೆ ರಸ್ತೆಯ ಸುತ್ತಮುತ್ತ ಹಾಗೂ ಕೆರೆಯ ಸುತ್ತಲೂ ಸುರಿಯುತ್ತಿದ್ದರೂ ಪುರಸಭಾ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಕೈಕಟ್ಟಿ ಕುಳಿತಿದ್ದಾರೆ. ಪಟ್ಟಣದ ದೊಡ್ಡಕೆರೆ ಮತ್ತು ಚಿಕ್ಕಕೆರೆಗಳಿಗೆ, ಸತ್ತ ದನ ಕರುಗಳು, ನಾಯಿಗಳನ್ನು ತಂದು ಹಾಕುತ್ತಿರುವುದರಿಂದ ನೀರು ಕಲುಸಿತವಾಗಿ ಕೆರೆಯಲ್ಲಿನ ಮೀನುಗಳು ಸಾಯುತ್ತಿರುವುದಲ್ಲದೆ, ದನಕರುಗಳು ಈ ನೀರನ್ನೇ ಕುಡಿಯುವುದರಿಂದ ರೋಗಕ್ಕೆ ತುತ್ತಾಗುತ್ತಿವೆ. ಅಲ್ಲದೆ ಮುಂಗಾರು ಪ್ರಾರಂಭವಾಗಿ ಮಳೆಯಿಂದ ಬೀಳುತ್ತಿರುವ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯಲಾಗದೆ ದುರ್ವಾಸನೆ ಬರುತ್ತಿದೆ, ಕಾಲುವೆಯಲ್ಲಿ ತ್ಯಾಜ್ಯ ಮತ್ತು ಇತರೆ ಕೊಳೆತ ಕಸವು ಹೊರ ಹೋಗಲಾರದೆ ಎಂಟು ಹತ್ತು ದಿನಗಳಾದರೂ ಕಾಲುವೆಯನ್ನು ಸುಚಿಗೊಳೀಸುವ ಕೆಲಸ ಮಾಡುತ್ತಿಲ್ಲ.
ತ್ಯಾಜ್ಯ ವಿಲೇವಾರಿ ಘಟಕವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ: ಪಟ್ಟಣದ ಕಗ್ಗುಂಡಿಯ ಬಳಿ ತ್ಯಾಜ್ಯ ಶೇಖರಣಾ ಘಟಕ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೋಟೆಲ್ ಹಾಗೂ ಬಾರ್ ಮಾಲೀಕರು ತ್ಯಾಜ್ಯವನ್ನು ತಂದು ತಂದು ಸುರಿಯುತ್ತಿದ್ದಾರೆ. ಪಟ್ಟಣದ ವಾಲ್ಮೀಕಿ ಭವನಕ್ಕೆ ಹೊಂದಿಕೊಡಂತೆ ಬಿ.ಎಂ.ರಸ್ತೆಯಲ್ಲಿ ಕಸ ವಿಲೇವಾರಿಯಾಗದೆ ರಾಶಿರಾಶಿ ಕಸ ಗಬ್ಬೆದ್ದು ನಾರುತ್ತಿದೆ. ಇದರಿಂದ ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಈ ಸಮಸ್ಯೆಗಳು ಒಂದೆಡೆಯಾದರೆ ಪಟ್ಟಣದ ಅರಸನ ಕೆರೆ, ಮಸಣಿಕಮ್ಮ ದೇವಾಲಯದ ಬಳಿ ಇರುವ ರಾಜ ಕಾಲುವೆ, ಬಸ್ ನಿಲ್ದಾಣಕ್ಕೆ ಕಣ್ಣಿಗೆ ಕಸದ ರಾಶಿಗಳೆ ಕಾಣುತ್ತವೆ. ಇಲ್ಲಿರುವ ಸಾರ್ವಜನಿಕ ಶೌಚಗೃಹ ಬಳಿ ಹಾಗೂ ಪ್ರಯಾಣಿಕರ ಆಸನಗಳ ಬಳಿ ಎಲ್ಲೆಂದರಲ್ಲಿ ಕಸ ಬಿದ್ದಿದೆ. ಶೌಚಗೃಹದ ನೀರು ಬಸ್ ನಿಲ್ದಾಣದಲ್ಲಿ ಹರಿಯುತ್ತಿರುವುದರಿಂದ ಜನರು ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದ ಸ್ವಚ್ಛತೆ ಕಾಪಾಡಲು ಪುರಸಭಾ ಅಧಿಕಾರಿಗಳು ಮುಂದಾಗಬೇಕು ಎಂದು ಸಾರ್ವಜನಿಕರು ಮತ್ತು ಪ್ರಯಾಣಿಕರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular