ಮೈಸೂರು: ನಗರದ ಆರು ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಉದ್ದೇಶಿಸಿದ್ದ ಪೇ ಅಂಡ್ ಪಾರ್ಕಿಂಗ್‌ಗೆ ಕರೆಯಲಾಗಿದ್ದ ಟೆಂಡರ್‌ಗೆ ಮಹಾನಗರ ಪಾಲಿಕೆ ತಡೆ ನೀಡಿದೆ.
ಜೂ.೯ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ವಾಹನಗಳ ನಿಲುಗಡೆಗೆ ಶುಲ್ಕ ವಿಧಿಸಲು ನಿರ್ಧರಿಸಲಾಗಿತ್ತು. ಪಾಲಿಕೆಯ ಈ ನಿರ್ಧಾರಕ್ಕೆ ಉದ್ಯಮಿಗಳು, ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾದ್ದರಿಂದ ಪಾಲಿಕೆ ಟೆಂಡರ್ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮೇಯರ್ ಶಿವಕುಮಾರ್, ಪೇ ಅಂಡ್ ಪಾರ್ಕಿಂಗ್‌ಗೆ ಎರಡು ದಿನಗಳ ಹಿಂದೆ ಟೆಂಡರ್ ಕರೆಯಲಾಗಿತ್ತು. ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ. ಇವರೊಂದಿಗೆ ಮಾತುಕತೆ ನಡೆಸಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಡಿ.ದೇವರಾಜ ಅರಸು ರಸ್ತೆ, ಶಿವರಾಂ ಪೇಟೆ ವ್ಯಾಪಾರಸ್ಥರು ನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಹಲವರು ಇದಕ್ಕೆ ಬೆಂಬಲ ಸೂಚಿಸಿದ್ದರು. ಬೆಳಗ್ಗೆ ವಾಹನ ನಿಲ್ಲಿಸುವ ಗ್ರಾಹಕರು ತಡರಾತ್ರಿ ತೆಗೆದುಕೊಂಡು ಹೋಗುವುದರಿಂದ ಮಾಲೀಕರ ವಾಹನಗಳ ನಿಲುಗಡೆಗೂ ಸಮಸ್ಯೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದರು ಎಂದು ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.
ಪಾಲಿಕೆಗೆ ಆದಾಯ ತರುವ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸುವ ಉದ್ದೇಶ ಇರಲಿಲ್ಲ. ಸಾರ್ವಜನಿಕರ ವಾಹನ ನಿಲುಗಡೆಗೆ ಅನುಕೂಲವಾಗಲೆಂದು ಪೇ ಅಂಡ್ ಪಾರ್ಕಿಂಗ್ ಜಾರಿಗೆ ತರಲು ಮುಂದಾಗಿದ್ದೆವು ಎಂದು ಹೇಳಿದ್ದಾರೆ.
ಸಮಾಲೋಚನೆ: ಪಾಲಿಕೆ ನಿರ್ಧಾರಕ್ಕೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಮಾಧ್ಯಮ ಹೇಳಿಕೆ ನೀಡಿದ್ದರು. ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ವಿರೋಧ ವ್ಯಕ್ತಪಡಿಸಿದ್ದರು. ಈ ವ್ಯವಸ್ಥೆಯನ್ನು ವಿರೋಧಿಸುವ ಎಲ್ಲರೊಂದಿಗೆ ಮುಕ್ತ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ನುಡಿದರು.
ಈ ಯೋಜನೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇದೆ. ಕಂಪ್ಯೂಟರೈಸ್ಡ್ ಬಿಲ್ ನೀಡಲಾಗುತ್ತದೆ. ಶುಲ್ಕದ ಕುರಿತು ಬೃಹತ್ ಎಲ್‌ಇಡಿ ಪರದೆಗಳಲ್ಲಿ ವಿವರ ಹಾಕಲಾಗುತ್ತದೆ ಎಂದು ಮೇಯರ್ ವಿವರಿಸಿದ್ದಾರೆ.
ಉದ್ಯಮಿಗಳು, ವ್ಯಾಪಾರಸ್ಥರ ಸಲಹೆ ಪಡೆದು ತೀರ್ಮಾನಿಸುತ್ತೇವೆ. ವಾಹನಗಳ ನಿಲುಗಡೆ ಸಮಸ್ಯೆ ಇತ್ಯರ್ಥಕ್ಕೆ ಇತರೆ ಸಲಹೆ ನೀಡಿದರೂ ಸ್ವೀಕರಿಸಲಾಗುತ್ತದೆ ಎಂದು ಹೇಳಿದರು.