ಬಳ್ಳಾರಿ : ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ನಮ್ಮ ನಿಮ್ಮ ಬದುಕಿನ ಸಮಸ್ಯೆಗಳ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಜಾತಿ-ಧರ್ಮದ ಹೆಸರಿನಲ್ಲಿ ಭಾರತೀಯರನ್ನು ಪರಸ್ಪರ ಕಚ್ಚಾಡಿಸಿ, ವಿಭಜನೆ ಮೂಲಕ ರಾಜಕಾರಣ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸಂಡೂರಿನ ವಡ್ಡು ಗ್ರಾಮದಲ್ಲಿ ನಡೆದ ಬೃಹತ್ ಜನಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರು ಭಾರತೀಯರ ಮನಸ್ಸು-ಹೃದಯಗಳನ್ನು ಬೆಸೆಯುವ ಭಾರತ್ ಜೋಡೋ ಚಳವಳಿಯನ್ನು ಮುನ್ನಡೆಸಿದ್ದಾರೆ. ರೈತರ ಬದುಕನ್ನು ಮಾರಣ ಹೋಮ ಮಾಡುವ ಕರಾಳ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿತು. ದೇಶಾದ್ಯಂತ ರೈತರು ನಡೆಸಿದ ವಿರೋಚಿತ ಹೋರಾಟಕ್ಕೆ ಶರಣಾಗಿ ಮೋದಿ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಿತು. ರೈತರ ಬದುಕಿಗೆ ಕರಾಳತೆ ಸೃಷ್ಟಿಸಿದ ಪ್ರಧಾನಿ ಮೋದಿ ಅವರ ಸರ್ಕಾರ ಮತ್ತೊಂದು ಕಡೆ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಾ, ಇಡೀ ದೇಶದ ಶ್ರಮಿಕ ಮತ್ತು ದುಡಿಯುವ ವರ್ಗಗಳ ಬದುಕಿನ ಅವಕಾಶಗಳನ್ನು ಹೊಸಕಿ ಹಾಕುವ ಹುನ್ನಾರವನ್ನೂ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸಂಸದ ಅನಂತ ಕುಮಾರ ಹೆಗ್ಡೆ ಅವರು ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲಿಕ್ಕೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪ್ರಧಾನಿ ಮೋದಿ ಅವರು ಅಲ್ಲಗಳೆಯಲಿಲ್ಲ. ೧೯೪೭ ರಿಂದ ೨೦೧೪ ರವರೆಗೂ ಭಾರತ ದೇಶದ ಸಾಲ ಇದ್ದದ್ದು ಕೇವಲ ೫೪ ಲಕ್ಷ ಕೋಟಿ. ಮೋದಿ ಅವರು ಪ್ರಧಾನಿ ಆದ ೧೦ ವರ್ಷಗಳಲ್ಲಿ ದೇಶದ ಸಾಲ ೧೮೫ ಲಕ್ಷ ಕೋಟಿಗೆ ಏರಿಕೆಯಾಗಿದೆ. ಕೇವಲ ಮೋದಿಯವರು ಒಬ್ಬರೇ ತಮ್ಮ ಅವಧಿಯಲ್ಲಿ ?೧೩೫ ಲಕ್ಷ ಕೋಟಿ ಸಾಲ ಮಾಡಿಟ್ಟಿದ್ದಾರೆ. ಇದೆಲ್ಲವನ್ನೂ ತೀರಿಸುವ ಜವಾಬ್ದಾರಿ ಭಾರತೀಯರ ತಲೆಗೆ ಬಂದಿದೆ. ಇದೇ ಮೋದಿಯವರ ಕೀರ್ತಿ ಎಂದು ಆರೋಪಿಸಿದ್ದಾರೆ.
ಮೋದಿಯವರು ಭಾರತೀಯರ ಪಾಲಿಗೆ ತಂದ ಕೆಟ್ಟ ದಿನಗಳ ಬಗ್ಗೆ ಯಾವತ್ತೂ ಅವರ ಮನ್ ಕಿ ಬಾತ್ ನಲ್ಲಿ ಮಾತಾಡುವುದಿಲ್ಲ. ರಾಜ್ಯದಲ್ಲೂ ಅಧಿಕಾರ ನಡೆಸಿದ ಃಎP ಏಚಿಡಿಟಿಚಿಣಚಿಞಚಿ ಸರ್ಕಾರ ಕೇವಲ ಲೂಟಿ ಮಾಡಿ ಮನೆ ಸೇರಿದ್ದು ಬಿಟ್ಟರೆ ಅಭಿವೃದ್ಧಿ ಕಡೆ ತಲೆ ಹಾಕಿ ಕೂಡ ಮಲುಗಲಿಲ್ಲ. ಬಿಜೆಪಿ ತನ್ನ ಅವಧಿಯಲ್ಲಿ ಇಡೀ ಸಂಡೂರಿಗೆ ಒಂದೇ ಒಂದು ಮನೆ ಕಟ್ಟಿ ಕೊಡಲಿಲ್ಲ. ಇದನ್ನೆಲ್ಲಾ ನಾನು ಪ್ರಶ್ನಿಸುತ್ತೇನೆ ಎನ್ನುವ ಕಾರಣಕ್ಕೆ, ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಮಾಡಿರುವ ಅನ್ಯಾಯಗಳ ವಿರುದ್ಧ ಬೆಂಗಳೂರಿನಿಂದ ದೆಹಲಿವರೆಗೂ ಹೋಗಿ ಹೋರಾಟ ಮಾಡಿದೆವು ಎನ್ನುವ ಕಾರಣದಿಂದ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ.
ಇದಕ್ಕೆಲ್ಲಾ ಉತ್ತರ ಕೊಡುವ ಕಾಲ ಬಂದಿದೆ. ಈ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುತ್ತಾರೆ. ಸಂಡೂರಿನಲ್ಲಿ ಅನ್ನಪೂರ್ಣಮ್ಮ ಅವರನ್ನು ೫೦ ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರೆ ನನಗೆ ದೊಡ್ಡ ಶಕ್ತಿ ಬರುತ್ತದೆ ಎಂದರು.