ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ತಡೆಗಟ್ಟಲು ತಿರುಪತಿ ಗೋಪಾಲಸ್ವಾಮಿ ಬೆಟ್ಟದ ಮಾದರಿಯಲ್ಲಿ ತಪಾಸಣ ಕೇಂದ್ರ ರಚಿಸಲು ಚಿಂತನೆಯಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ತಿಳಿಸಿದರು.
ಪರಿಸರ ಸ್ನೇಹಿ ತಂಡ ಹಾಗೂ ಕೆ.ಎಂ.ಪಿ.ಕೆ ಟ್ರಸ್ಟ್ ಸಂಘಟನೆ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮನೆಯಿಂದಲೇ ಪ್ಲಾಸ್ಟಿಕ್ ಬಳಕೆ ತರದ ಹಾಗೆ ಸಾರ್ವಜನಿಕರು ಮುಂದಾಗಬೇಕು. ಸರ್ಕಾರದ ನಿಯಮವನ್ನು ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ. ಮೈಸೂರು ಸ್ವಚ್ಛನಗರಿಯಾಗಿದ್ದು ಆಷಾಢ ಮಾಸದಲ್ಲಿ ಬೆಟ್ಟಕ್ಕೆ ಲಕ್ಷಾಂತರ ಜನರು ಆಗಿಮಿಸುತ್ತಾರೆ. ಪ್ಲಾಸ್ಟಿಕ್ ತಡೆಗಟ್ಟಲು ಟಾಸ್ಕ್ ಫೋರ್ಸ್ ರಚಿಸಲಾಗುವುದು. ವೈಜ್ಞಾನಿಕವಾಗಿ ಕಸ ನಿರ್ಮೂಲನೆಯಾಗಬೇಕಾದರೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕಿದೆ ಎಂದರು.
ಇದೇ ವೇಳೆ ಮೆಟ್ಟಿಲು ಮೂಲಕ ಬೆಟ್ಟ ಹತ್ತುವವರಿಗೆ ಬಟ್ಟೆ ಬ್ಯಾಗ್ ವಿತರಿಸಲಾಯಿತು. ಪ್ಲಾಸ್ಟಿಕ್ ಬಿಡಿ ಬಟ್ಟೆ ಬ್ಯಾಗ್ ಹಿಡಿ ಎಂಬ ಸಂದೇಶ ಸಾರುವ ಭಿತ್ತಿ ಚಿತ್ರ ಪ್ರದರ್ಶಿಸಿ ಗಮನಸೆಳೆದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಚಿನ್ನ ಬೆಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್, ಹಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಪರಿಸರ ಎಂಜಿನಿಯರ್ ಜ್ಯೋತಿ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ, ರಾಕೇಶ್, ಸಚಿಂದ್ರ, ಚಕ್ರಪಾಣಿ, ಚೇತನ್ ಆರಾಧ್ಯ, ಬಸವರಾಜು, ಮಂಜುನಾಥ, ಉಮಾ, ವನಜಾಕ್ಷಿ, ರಂಗಸ್ವಾಮಿ, ಮಂಜುನಾಥ್ ಹಾಜರಿದ್ದರು.