ಬಂಡೂರು ತಳಿಯ ಕುರಿಗಳಿಗೆ ಭಾರಿ ಬೇಡಿಕೆ ಇರುವುದು ಗೊತ್ತೇ ಇದೆ. ಮಳವಳ್ಳಿ ತಾಲೂಕಿನ ಬಂಡೂರು ಈ ತಳಿಯ ಮೂಲಸ್ಥಾನ, ರುಚಿಯಾದ ಮಾಂಸದ ಕಾರಣದಿಂದ ಭಾರಿ ಬೇಡಿಕೆ ಪಡೆದುಕೊಂಡಿದೆ. ಅಲ್ಲದೆ ಈ ಕುರಿಗಳು ನೋಡುವುದಕ್ಕೂ ಕೂಡ ಮುದ್ದಾಗಿರುವುದರಿಂದ ಎಲ್ಲರೂ ಬಂಡೂರು ಕುರಿ ಸಾಕಲು ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ರೈತ ಬಂಡೂರು ಟಗರಿಗೆ 1.1 ಲಕ್ಷ ರುಪಾಯಿ ನೀಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಚ್ಚೇಗೌಡನದೊಡ್ಡಿ ಗ್ರಾಮದ ಮರೀಗೌಡ ಎನ್ನುವ ರೈತ ಇಷ್ಟೊಂದು ಹಣ ನೀಡಿ ಬಂಡೂರು ತಳಿಯ ಟಗರನ್ನು ಖರೀದಿ ಮಾಡಿದ್ದಾರೆ. ದೇವಿಪುರ ಗ್ರಾಮದಲ್ಲಿ ಈ ಟಗರನ್ನು ಖರೀದಿ ಮಾಡಿ ತಂದಿದ್ದಾರೆ. ದುಬಾರಿ ಬೆಲೆಯ ಟಗರನ್ನು ಅದ್ದೂರಿ ಮೆರವಣಿಗೆ ಮೂಲಕ ಮನೆಗೆ ಕರೆದುಕೊಂಡು ಬಂದಿದ್ದಾರೆ. ಹುಸ್ಕೂರು ಗ್ರಾಮದಿಂದ ಹುಚ್ಚೇಗೌಡನ ದೊಡ್ಡಿಯವರೆಗೆ ಟಗರನ್ನು ಮೆರವಣಿಗೆ ಮೂಲಕ ಕರೆತರಲಾಗಿದೆ.
ಬಂಡೂರು ಕುರಿಗಳ ಸಂರಕ್ಷಣೆ: ಹುಸ್ಕೂರು, ಅಪ್ಪಾಜಯ್ಯನದೊಡ್ಡಿ, ಬಾಣಗಹಳ್ಳಿ, ಅಂತರವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೂರಾರು ಗ್ರಾಮಸ್ಥರು ಮೆರವಣಿಗೆಯಲ್ಲಿ ಬಂದ ಟಗರನ್ನು ನೋಡಿ ಅಚ್ಚರಿಪಟ್ಟರು. ಲಕ್ಷ ರುಪಾಯಿ ನೀಡಿ ಟಗರು ಖರೀದಿಸಿದ ಬಗ್ಗೆ ಮಾತನಾಡಿರುವ ರೈತ ಮರಿಗೌಡ, ಬಂಡೂರು ತಳಿಯ ಟಗರು ಮಾಂಸಕ್ಕಾಗಿ ಪ್ರಸಿದ್ಧವಾಗಿದೆ. ಈ ತಳಿಯನ್ನು ಸಂವರ್ಧನೆ ಮಾಡುವ ಉದ್ದೇಶಕ್ಕಾಗಿ ಉತ್ತಮ ಟಗರನ್ನು ಖರೀದಿ ಮಾಡಿದ್ದೇನೆ ಎಂದು ಹೇಳಿದ್ದಾರೆ. 50 ಕ್ಕೂ ಹೆಚ್ಚು ಕುರಿಗಳನ್ನು ಹೊಂದಿರುವ ಮರಿಗೌಡ ಮರಿಗೌಡ ವ್ಯವಸಾಯದ ಜೊತೆ ಕುರಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಸದ್ಯ ಅವರ ಬಳಿ 50ಕ್ಕೂ ಹೆಚ್ಚು ಸಾಮಾನ್ಯ ತಳಿಯ ಟಗರುಗಳಿವೆ. ಸದ್ಯ ಅವರು ಖರೀದಿ ಮಾಡಿರುವ ಟಗರಿಗೆ 18 ತಿಂಗಳು ತುಂಬಿದೆ. ಕುರಿ ಸಾಕಾಣಿಕೆ ನನಗೆ ಆದಾಯದ ಮೂಲವಾಗಿದ್ದು, ಬಂಡೂರು ತಳಿ ಸಾಕಾಣಿಕೆ ಮಾಡುವ ಮೂಲಕ ಮತ್ತಷ್ಟು ಲಾಭವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.