ಮೈಸೂರು: ರಾಜ್ಯ ಎಸ್ಕಾಂ ವಿದ್ಯುತ್ ದರದಲ್ಲಿ ಅಸಾಧಾರಣ ಹಾಗೂ ಮತ್ತು ಅವೈಜ್ಞಾನಿಕ ರೀತಿಯಲ್ಲಿ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಜೂ.೨೨ರಂದು ಕೈಗಾರಿಕೆ, ವರ್ತಕರು ಒಂದು ದಿನದ ಬಂದ್ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲರೂ ಸಹಕರಿಸುವಂತೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವವೈಜ್ಞಾನಿಕವಾಗಿ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಕೈಗಾರಿಕೋದ್ಯಮಿಗಳು ಹಾಗೂ ವರ್ತಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹೀಗಾಗಿ ಈ ಬಂದ್ ಆಚರಿಸುವ ಮೂಲಕ ಸರ್ಕಾರ ವಿದ್ಯುತ್ ದರ ಹೆಚ್ಚಳ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸಲಾಗುವುದೆಂದರು.
ಕಳೆದ ಎಂಟು ದಿನಗಳಿಂದ ರಾಜ್ಯದ ಎಲ್ಲಾ ಸಂಘ ಸಂಸ್ಥೆಗಳ ಜೊತೆಗೂಡಿ ಹೆಚ್ಚು ಮಾಡಿದಂತಹ ನಿಗದಿತ ದರ ಇಳಿಸಬೇಕು, ಇಂಧನ ಹೊಂದಾಣಿಕೆ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಶೇ.೪೦ ರಿಂದ ೮೦ ಪ್ರತಿಶತವರೆಗಿನ ಹೆಚ್ಚಾದ ವಿದ್ಯುತ್ ಶುಲ್ಕ ಕಡಿಮೆ ಮಾಡಬೇಕು ಎಂಬಿವೇ ಮೊದಲಾದ ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಆದರೂ, ಇದನ್ನು ಸರ್ಕಾರ ನಿರ್ಲಕ್ಷಿಸಿರುವುದನ್ನು ಖಂಡಿಸಿ ಹಾಗೂ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿವಾರ್ಯವಾಗಿ ಈಗ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಸರ್ಕಾರ ನಮ್ಮ ಈ ನ್ಯಾಯಯುತ ಬೇಡಿಕೆ ಈಡೇರಿಸುವುದೆಂಬ ವಿಶ್ವಾಸವಿದೆ. ಇದೇ ವೇಳೆ ರಾಜ್ಯದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಾದ ಗದಗ, ಬಿಜಾಪುರ, ರಾಣೆಬೆನ್ನೂರು, ರಾಯಚೂರು, ತಾಲಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಸಿರಸಿ, ಕಾರವಾರ, ಬಿದರ್, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಗಳೂರು, ಯಾದಗೀರ್, ಚಿತ್ರದುರ್ಗ, ಕಲ್ಯಾಣ ಕರ್ನಾಟಕ, ಹಾವೇರಿ, ಹಾಸನ, ಬಳ್ಳಾರಿ, ಬೆಳಗಾವಿ ಹಾಗೂ ವಿವಿಧ ಕೈಗಾರಿಕಾ ಸಂಘ ಸಂಸ್ಥೆಗಳು ಈ ಬಂದ್ ಕರೆಗೆ ಬೆಂಬಲ ಸೂಚಿಸಿವೆ. ಜಿಲ್ಲೆಯ ಎಲ್ಲ ಕೈಗಾರಿಕಾ ಪ್ರದೇಶಗಳ ಕೈಗಾರಿಕೆಗಳು, ನಗರದ ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ದೇವರಾಜ ಮಾರುಕಟ್ಟೆಗಳ ವರ್ತಕರು, ಉದ್ಯಮಿಗಳು ಸಹಾ ಈ ಬಂದ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದರು.
ಗೋಷ್ಠಿಯಲ್ಲಿ ರಾಮಕೃಷ್ಣೇಗೌಡ, ಮಂಜುನಾಥ್, ಚಂದ್ರಶೇಖರ್ ಇನ್ನಿತರರು ಇದ್ದರು.