Friday, April 11, 2025
Google search engine

Homeಬ್ರೇಕಿಂಗ್ ನ್ಯೂಸ್ಬಾಲಕಾರ್ಮಿಕ ಪದ್ದತಿ ಪರಿಣಾಮಗಳ ಕುರಿತ ಜಾಗೃತಿ ಅಗತ್ಯ : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ

ಬಾಲಕಾರ್ಮಿಕ ಪದ್ದತಿ ಪರಿಣಾಮಗಳ ಕುರಿತ ಜಾಗೃತಿ ಅಗತ್ಯ : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ

ಚಾಮರಾಜನಗರ: ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ದಿನಾಚರಣೆಗಳು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೇ ಪರಿಣಾಮಕಾರಿಯಾಗಿ ಜಾಗೃತಿ ಉಂಟು ಮಾಡಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಬಗ್ಗೆ ಮಕ್ಕಳು ಮಾತ್ರವಲ್ಲದೇ ಮಾಲೀಕರು ಸಹ ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳಬೇಕು. ಸಾರ್ವಜನಿಕರು ಬಾಲಕಾರ್ಮಿಕ ಪದ್ಧತಿ ಕಾರ್ಯಕ್ರಮದ ಆಚರಣೆಯ ಜೊತೆಗೆ ಅದರ ಉದ್ದೇಶವನ್ನು ತಿಳಿದುಕೊಳ್ಳಬೇಕು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಮಾತ್ರವಲ್ಲದೇ ವಿವಿಧ ವರ್ಗದ ಮಾಲೀಕರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಮಕ್ಕಳು ಯಾವ ನಿಟ್ಟಿನಲ್ಲಿ ಯೋಚಿಸುತ್ತಾರೆ ಯಾವ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ ಎಂಬುದರ ಬಗ್ಗೆ ಪೋಷಕರು ಗಮನವಹಿಸಬೇಕು ಎಂದರು.
ಸಮಾಜದಲ್ಲಿ ಕಂಡುಬರುವ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು. ಬಾಲಕಾರ್ಮಿಕ ಪದ್ಧತಿಯಿಂದ ಹೊರಗೆ ಬಂದಾಗ ಮಾತ್ರ ಸಮಾನ ಸಮಾಜ ಕಾಣಲು ಸಾಧ್ಯವಾಗುತ್ತದೆ. ಸಮಾನ ಸಮಾಜ ನಿರ್ಮಾಣಕ್ಕೆ ಎಲ್ಲರೂ ಚಿಂತಿಸಬೇಕು. ಬಾಲಕಾರ್ಮಿಕ ಪದ್ಧತಿ ವಿರೋಧಿಸುವುದು ದೇಶದ ಪ್ರಜ್ಞಾವಂತರ ಜವಾಬ್ದಾರಿಯಾಗಿದೆ ಎಂದರು.
ಬಾಲಕಾರ್ಮಿಕ ಪದ್ಧತಿ ಸಂಬಂಧಿಸಿದ ಚಟುವಟಿಕೆಗಳು ನಿಮ್ಮ ಸುತ್ತಮುತ್ತ ನಡೆಯುತ್ತಿದ್ದಲ್ಲಿ ಬಾಲಕಾರ್ಮಿಕ ಪದ್ಧತಿಯಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸುವುದು ಕಂಡುಬಂದಲ್ಲಿ ಸಂಬಂಧಪಟ್ಟ ಸಹಾಯವಾಣಿ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಮಾತನಾಡಿ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಅವಶ್ಯಕವಾಗಿದೆ. ಬಾಲಕಾರ್ಮಿಕರ ಬಗ್ಗೆ ಮಾಹಿತಿ ತಿಳಿದಾಗ ೧೦೯೮ ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಪ್ರತಿಯೊಬ್ಬರಿಗೂ ಸಹ ಅವರದೇ ಹಕ್ಕುಗಳು ಇರುತ್ತವೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಅವರನ್ನು ಮುಖ್ಯ ವಾಹಿನಿಗೆ ತರಲು ಸಾಧ್ಯ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತಾ ಅವರು ಮಾತನಾಡಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕಿದೆ. ಬಾಲಕಾರ್ಮಿಕ ಪದ್ದತಿ ನಿಷೇಧ ಕಾಯ್ದೆ ೧೯೮೬ ರಡಿಯಲ್ಲಿ ಎಲ್ಲಾ ರೀತಿಯಲ್ಲಿ ಕ್ರಮವಹಿಸಲಾಗುವುದು. ಸುಸ್ಥಿರ ಅಭಿವೃದ್ಧಿ ನಿಟ್ಟಿನಲ್ಲಿ ೨೦೨೫ರೊಳಗೆ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಂಬಂಧಿಸಿದಂತೆ ೧೧ ಇಲಾಖೆಗಳ ಜೊತೆಗೆ ಕೈಜೋಡಿಸಿಕೊಂಡು ಎಲ್ಲಾ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಪಾಯಕಾರಿ ಉದ್ದಿಮೆ ಹಾಗೂ ಇತರೆ ಕಡೆಗಳಲ್ಲಿ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಂಡಿರುವವರ ವಿರುದ್ದ ಕಾನೂನಾತ್ಮಕ ಕ್ರಮ ವಹಿಸಲಾಗಿದೆ ಎಂದು ಸವಿತಾ ಅವರು ತಿಳಿಸಿದರು.
ಮೈಸೂರಿನ ಪೀಪಲ್ಸ್ ಲೀಗಲ್ ಪೋರಂನ ನಿರ್ದೇಶಕರು ಹಾಗೂ ಹಿರಿಯ ವಕೀಲರಾದ ಪಿ.ಪಿ. ಬಾಬುರಾಜ್ ಅವರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಬಾಲಕಾರ್ಮಿಕ ಪದ್ಧತಿಯಿಂದ ಹೊರಬಂದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಡಾ. ಸುರೇಶ್, ಹೊಂಗನೂರು ಶಂಕರ್, ರಂಜಿತಾ ಅವರನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹೆಚ್.ಎಸ್. ಬಿಂದ್ಯಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್. ಚಲುವರಾಜ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಎಂ. ಮಹೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಥಾಗೆ ಚಾಮರಾಜೇಶ್ವರ ದೇವಾಲಯದ ಬಳಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಹಾಗೂ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

RELATED ARTICLES
- Advertisment -
Google search engine

Most Popular