ಚಾಮರಾಜನಗರ: ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲು ವಿದ್ಯಾರ್ಥಿಗಳು ಪೋಷಕರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಅವಕಾಶವಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಪೂವಿತಾ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ರಕ್ಷಣಾ ಮಕ್ಕಳ ಘಟಕ, ಸಾರ್ವಜನಿಕ ಶಿಕ್ಷಣ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಭಾಗಿತ್ವದಲ್ಲಿ ಬಾಲ್ಯ ವಿವಾಹ ನಿμÉೀಧ ಮತ್ತು ಪೋಕ್ಸೊ ಕಾಯ್ದೆ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚು ಕಂಡು ಬಂದಿದ್ದು, ಎಫ್.ಐ.ಆರ್ ಕೂಡ ದಾಖಲಾಗಿದೆÉ. ಬಾಲ್ಯವಿವಾಹ ಹಾಗೂ ಪೋಕ್ಸೊ ಪ್ರಕರಣವು ತುಂಬಾ ಗಂಭೀರವಾಗಿವೆ. ಜಿಲ್ಲೆಯ ಪ್ರತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಕ್ಕಾಗಿ ರಾಯಭಾರಿಗಳನ್ನಾಗಿ ನೇಮಿಸಲಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರ ಏರ್ಪಾಡಾಗಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ನಿಮ್ಮ ಶಾಲೆಗಳಲ್ಲಿರುವ ವಿದ್ಯಾರ್ಥಿ ಸ್ನೇಹಿತರಿಗೆ ಹೆಚ್ಚಿನ ಅರಿವು ಉಂಟು ಮಾಡಬೇಕು ಎಂದರು. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಸ್ವಾವಲಂಬಿಗಳಾಗಿ ಬದುಕಬೇಕು. ಚೆನ್ನಾಗಿ ಓದಿದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ ಅವರು ಸಲಹೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಮಾತನಾಡಿ ಹೆಚ್ಚು ಬಾಲ್ಯವಿವಾಹಗಳು ತಂದೆ ತಾಯಿ ಪೋಷಕರ ಅಭಿಪ್ರಾಯದ ಮೇರೆಗೆ ನಡೆಯುವ ಸಾಧ್ಯತೆಗಳಿರುತ್ತವೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಬಾಲ್ಯವಿವಾಹದಿಂದಾಗುವ ಗಂಭೀರ ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿದಾಗ ಬಾಲ್ಯ ವಿವಾಹದಂತಹ ಪ್ರಕರಣಗಳನನು ತಡೆಯಲು ಸಾಧ್ಯವಾಗಲಿದೆ ಎಂದರು.
ಬಾಲ್ಯವಿವಾಹವು ಮಾನಸಿಕವಾಗಿ ದೈಹಿಕವಾಗಿ ಗಂಭೀರ ಪರಿಣಾಮ ಬೀರಿ ಜೀವನ ಹಾಳಾಗುವ ಸಾಧ್ಯತೆಗಳಿರುತ್ತದೆ. ಸಮಾಜದಲ್ಲಿ ಇಂತಹ ಪ್ರಕರಣ ಕಂಡು ಬಂದರೇ ಸಹಾಯವಾಣಿಗಳ ಮೂಲಕ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮಾತನಾಡಿ ಪ್ರತಿಯೊಬ್ಬ ಪೋಷಕರು ಮಕ್ಕಳ ಚಟುವಟಿಕೆಗಳನ್ನು ಗಮನಿಸಬೇಕು. ಮಕ್ಕಳಿಗೆ ಸರಿ ತಪ್ಪುಗಳ ಬಗ್ಗೆ ತಿಳಿಸಬೇಕು. ಉತ್ತಮ ಶಿಕ್ಷಣ ನೀಡಿದಾಗ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳನ್ನು ತಡೆಯಬಹುದು. ಸಮಾಜದಲ್ಲಿ ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು.
ಜಿಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಎನ್. ಲಕ್ಷ್ಮೀಪತಿ, ಡಾ. ನವೀನ್ ಚಂದ್ರ ಪಿ.ಎಂ.ಎಸ್.ಆರ್. ಸಂಸ್ಥೆಯ ಆಡಿಸ್ ಅರ್ನಾಲ್ಡ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸರಸ್ವತಿ, ಸರ್ಕಲ್ ಇನ್ಸ್‍ಪೆಕ್ಟರ್ ಶೇಷಾದ್ರಿ, ಕಾನೂನು ಸಲಹೆಗಾರರಾದ ರೂಪ, ಮಂಜುಳಾ, ಕಾರ್ಮಿಕ ಇಲಾಖೆಯ ಮಹೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.