ಬಾಲಸೋರ್:ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. 900ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈ ಹಿನ್ನೆಲೆ ಒಡಿಶಾ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದೆ. ರಾಜ್ಯದಲ್ಲಿ ಇಂದು (ಜೂ.03) ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.
ಘಟನಾ ಸ್ಥಳಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಆಗಿದ್ದೇನು?: ನಿನ್ನೆ (ಜೂ.02) ಸಂಜೆ 7.30ಕ್ಕೆ ಹೊರಟಿದ್ದ ಪಶ್ಚಿಮ ಬಂಗಾಲದ ಶಾಲಿಮರ್ ಸ್ಟೇಶನ್ ಮತ್ತು ಚೆನ್ನೈ ನಡುವೆ ಸಂಚರಿಸುವ ಕೋರಮಂಡಲ್ ಎಕ್ಸ್‌ಪ್ರಸ್ ಬಹಾನಾಗ ರೈಲು ನಿಲ್ದಾಣ ಸಮೀಪಿಸುತ್ತಲೇ ಏಕಾಏಕಿ ಹಳಿ ತಪ್ಪಿತು. ಈ ಪೈಕಿ 10-12 ಬೋಗಿಗಳು ಪಕ್ಕದ ಹಳಿಯ ಮೇಲೆ ಬಿದ್ದವು. ಆ ಹಳಿಯಲ್ಲಿ ಅದೇ ಸಮಯದಲ್ಲಿ ಯಶವಂತಪುರದಿಂದ ಬರುತ್ತಿದ್ದ ರೈಲು, ಬಿದ್ದಿದ್ದ ಬೋಗಿಗಳಿಗೆ ಢಿಕ್ಕಿ ಹೊಡೆಯಿತು. ಅನಂತರ ಬಂದ ಗೂಡ್ಸ್ ರೈಲು ಕೂಡ ಇದಕ್ಕೆ ಢಿಕ್ಕಿಯಾಯಿತು. ಇದರಿಂದಾಗಿ ಸಾವು- ನೋವು ಹೆಚ್ಚಾಯಿತು ಎಂದು ಒಂದು ಮೂಲಗಳು ತಿಳಿಸಿವೆ. ಆದರೆ ಘಟನೆ ಹೇಗಾಯಿತು ಎಂಬ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಾಗಿಲ್ಲ. ಘಟನ ಸ್ಥಳಕ್ಕೆ ತತ್‌ಕ್ಷಣವೇ ಹಲವು ಆ್ಯಂಬುಲೆನ್ಸ್ ಮತ್ತು ಬಸ್‌ಗಳನ್ನು ಕಳುಹಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.