ಪಿರಿಯಾಪಟ್ಟಣ: ರೈತರ ಕೃಷಿ ಚಟುವಟಿಕೆ ಹಾಗೂ ಕಾವೇರಿ ಕುಡಿಯವ ನೀರನ್ನು ಜನತೆಗೆ ಒದಗಿಸಬೇಕು ಎಂಬ ಉದ್ದೇಶದಿಂದ ೧೫೦ ಕೆರೆಗಳಿಗೆ ನೀರು ತುಂಬಿಸುವ ಐತಿಹಾಸಿಕ ಯೋಜನೆಯನ್ನು ಅವಧಿ ಮುಗಿದರೂ ಅಧಿಕಾರಿಗಳು ಪೂರ್ಣಗೊಳಿಸದಿರುವುದು ಬೇಸರ ತಂದಿದೆ ಎಂದು ಪಶುಪಾಲನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ೧೫೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಕಾವೇರಿ ನಿಗಮದ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
೨೦೧೭-೧೮ ನೇ ಸಾಲಿನಲ್ಲಿ ತಾಲ್ಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ಕಾವೇರಿ ನೀರನ್ನು ಒದಗಿಸಲು ಈ ಯೋಜನೆಯನ್ನು ೧೮ ತಿಂಗಳಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಕರೆ ತಂದು ಶಂಕುಸ್ಥಾಪನೆ ನೆರವೇರಿಸಿದ್ದೆ, ಆದರೆ ಈ ಯೋಜನೆ ಹಿಂದಿನ ಶಾಸಕ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರುತ್ಸಾಹದಿಂದ ಈ ಯೋಜನೆ ಅಳ್ಳ ಹಿಡಿದೆ ಆದ್ದರಿಂದ ಕೂಡಲೇ ಈ ಯೋಜನೆಗೆ ವೇಗ ಸಿಗುವಂತಾಗಿ ನಮ್ಮ ರೈತರಿಗೆ ಇದರ ಉಪಯೋಗ ಸಿಗುವಂತಾಗಬೇಕು ಆದ್ದರಿಂದ ಅಧಿಕಾರಿಗಳು ಇಂದಿನಿಂದಲೇ ಕೆಲಸ ಪುನರಾರಂಭಿಸಬೇಕು ಅದಕ್ಕಾಗಿ ಈ ಬಗ್ಗೆ ಪ್ರತಿದಿನ ನನಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಸಿದ ಅವರು, ನಾನು ಈ ಹಿಂದೆ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದ ಪರಿಣಾಮ ತಾಲೂಕಿನ ಅರ್ಧಭಾಗದಷ್ಟು ಹಳ್ಳಿಗಳು ಬೇಸಿಗೆಯಲ್ಲಿಯೂ ನೀರಿನ ತೊಂದರೆ ಇಲ್ಲದಂತೆ ಸುಖವಾಗಿದೆ. ಆದರೆ ಉಳಿದ ಅರ್ಧದಷ್ಟು ಹಳ್ಳಿಗಳು ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಿಸುತ್ತಿದ್ದವು ಹಾಗಾಗಿ ರೂ.೩೦೦ ಕೋಟಿ ಅನುದಾನ ತಂದು ೧೩೩ ಕೆರೆಗಳು ೧೭ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಆರಂಭಿಸಿ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶ ಹೊಂದಿದ್ದೆ. ಈ ಬಾರಿ ಮುಂಗಾರು ಮಳೆ ಇನ್ನೂ ಪ್ರಾರಂಭವಾಗಿಲ್ಲ, ಈಗಾಗಲೇ ತಾಲೂಕಿನ ಹಲವಾರು ಕೆರೆಗಳು ಬತ್ತಿಹೋಗಿ ರೈತರು ಮತ್ತು ಜನಜಾನುವಾರುಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದನ್ನು ಮನಗಂಡ ಅಧಿಕಾರಿಗಳು ಶೀಘ್ರವಾಗಿ ಕೆಲಸ ಮುಗಿಸಬೇಕು ಜುಲೈ ತಿಂಗಳ ೨೦ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಕರೆ ತಂದು ಅವರಿಂದಲೇ ೧೫೦ ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯ ಉದ್ಘಾಟನೆ ನೆರವೇರಿಸಬೇಕು ಎಂದರು.
ಯೋಜನೆಯ ವಿವರ: ತಾಲೂಕಿನ ಮುತ್ತಿನ ಮುಳುಸೊಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಪಿರಿಯಾಪಟ್ಟಣ ತಾಲೂಕಿನ ಕೆಲವು ಪ್ರದೇಶ ಈ ಹಿಂದೆ ಬರಪೀಡಿತವಾಗಿದ್ದು, ಸುಮಾರು ೭೯ ಗ್ರಾಮಗಳ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವುದು ಕಂಡುಬರುತ್ತದೆ. ಪಿರಿಯಾಟ್ಟಣ ತಾಲೂಕಿನ ಸ್ವಲ್ಪ ಭಾಗವು ಅರೆಮಲೆನಾಡು ಪ್ರದೇಶವಾಗಿದ್ದರೂ ಸಹ ಕೆಲವು ಹಳ್ಳಿಗಳಲ್ಲಿ ಮಳೆಯ ಕೊರತೆ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಾಗಿರುತ್ತದೆ. ಈ ಭಾಗದಲ್ಲಿ ಸರಕಾರವು ಹಲವಾರು ಕೊಳವೆ ಬಾವಿಗಳನ್ನು ಕೊರೆಸಿದ್ದರೂ ಸಹ ನೀರಿಕ್ಷಿತ ನೀರಿನ ಪ್ರಮಾಣ ದೊರಕುತ್ತಿಲ್ಲ. ಅಲ್ಲದೇ ಖಾಸಗಿ ಕೊಳವೆ ಬಾವಿಗಳು ಅಂತರ್ಜಲದ ಕೊರತೆಯಿಂದ ಬತ್ತಿಹೋಗುತ್ತಿದೆ.
ಈ ಪರಿಸ್ಥಿತಿಯನ್ನು ಅವಲೋಕಿಸಿದ ಕೆ.ವೆಂಕಟೇಶ್ ರವರು ಸದರಿ ಗ್ರಾಮಗಳ ವ್ಯಾಪ್ತಿಯ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಇತ್ಯಾದಿ ಪೂರೈಕೆಗಳ ಸೌಲಭ್ಯ ಕಲ್ಪಿಸುವ ಪ್ರಯುಕ್ತ ಪಿರಿಯಾಪಟ್ಟಣ ತಾಲೂಕಿನ ಒಳನಾಡು ಪ್ರದೇಶ ವ್ಯಾಪ್ತಿಯಲ್ಲಿ ಬರುವ ೭೯ ಗ್ರಾಮಗಳ ಕೆರೆಗಳಿಗೆ ಕಾವೇರಿ ನದಿಯಿಂದ ಸುಮಾರು ೧೩೩ ಕೆರೆ ಮತ್ತು ೧೭ ಕಟ್ಟೆಗಳು ಸೇರಿ ೧೫೦ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದರು.
೦.೮೨೮ ಟಿ.ಎಂ.ಸಿ ನೀರು ಬಳಕೆ: ಈ ಯೋಜನೆಯ ಪ್ರಕಾರ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳುಸೊಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ಮಳೆಗಾಲದ ಸಮಯದಲ್ಲಿ (ಸುಮಾರು ಮೂರುವರೆ ತಿಂಗಳು) ಏರು ಕೊಳವೆ ಮೂಲಕ ನೀರೆತ್ತಿ, ದೇಪೂರ ಗ್ರಾಮದ ಯೋಜಿತ ವಿತರಣಾ ತೊಟ್ಟಿ ನಂತರ ಎಡಭಾಗದ ಮತ್ತು ಬಲಭಾಗದ ಗುರುತ್ವಾಕರ್ಷಣೆಯ ಪೈಪ್ಲೈನ್ ಮುಖಾಂತರ ೧೫೦ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಸುಮಾರು ೦.೮೨೮ ಟಿ.ಎಂ.ಸಿ (೯೫ ಕ್ಯೂಸೆಕ್ಸ್) ನೀರು ಯೋಜನೆಗೆ ಬೇಕಾಗುತ್ತದೆ. ಈ ೦.೮೨೮ ಟಿ.ಎಂ.ಸಿ ನೀರನ್ನು ಕಾವೇರಿ ನದಿಯಿಂದ ತೆಗೆದುಕೊಳ್ಳಲು ಅನುಮತಿ ಪಡೆಯಲಾಗಿದೆ.
೧೧.೪೬೪ ಮೀಟರ್ ಕಾಲುವೆ: ಮುತ್ತಿನ ಮುಳ್ಳುಸೋಗೆ ಗ್ರಾಮದಿಂದ ಆರಂಭವಾಗಿ ಬಲದಂಡೆ ಮತ್ತು ಎಡದಂಡೆಗಳನ್ನು ನಿರ್ಮಿಸಿಕೊಂಡು ೧೨೫ ಕೀ.ಮಿ ಉದ್ದದ ಈ ಯೋಜನೆಗಾಗಿ ೧೧.೪೬೪ ಮೀಟರ್ ನೀರಿನ ಕಾಲುವೆ ನಿರ್ಮಾಣವಾಗಲಿದೆ. ೧೦೦ ಅಡಿ ಎತ್ತರದಿಂದ ಕೆರೆಗಳಿಗೆ ಕುಡಿಯುವ ನೀರು ತುಂಬಿಸಲಾಗುತ್ತದೆ. ಇದರಿಂದ ತಾಲೂಕಿನ ಕೆಲವು ಉಳಿದ ಕೆರೆಗಳಿಗೆ ಕಾವೇರಿ ನದಿ ಪಾತ್ರದಿಂದ ಪ್ರತಿ ವರ್ಷ ೦.೮೫ ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಬೃಹತ್ ಯೋಜನೆಗಾಗಿ ಸರ್ವೆ ಕಾರ್ಯವನ್ನು ಜಿಯೋಸ್ಟಿಂ ಎಂಬ ಕಂಪನಿಯ ವತಿಯಿಂದ ಡಿಜಿಟಲ್ ಸರ್ವೆ ಮಾಡಲಾಗಿದ್ದು, ಆಲನಹಳ್ಳಿ, ಚೌಡೇನಹಳ್ಳಿ, ನಂದಿನಾಥಪುರ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ಕೊನೆಯಾದರೆ ಮತ್ತೊಂದು ನಾಲೆ ಕಂಪಲಾಪುರದಲ್ಲಿ ಅಂತ್ಯಗೊಳ್ಳುತ್ತದೆ.
ಹೇಳೀಕೆ: ರಾಜ್ಯದ ಅತಿದೊಡ್ಡ ಏತ ನೀರಾವರಿ ಯೋಜನೆಗಳಲ್ಲಿ ಈ ಯೋಜನೆಯೂ ಒಂದು. ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯನ್ನು ೧೯೮೬ರಲ್ಲಿ ಮಾಡಿಸಿದ್ದೆ ಈಗ ಮತ್ತೆ ೩೦೦ ಕೋಟಿ ಖರ್ಚು ಮಾಡಿ ೧೫೦ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುವ ತಾಲೂಕಿನ ಜನರ ಮತ್ತು ರೈತರ ಬಹುದಿನಗಳ ಬೇಡಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರದಿಂದ ಈಡೇರುತ್ತಿರುವುದು ನನ್ನ ಭಾಗ್ಯ.
– ಪಶುಪಾಲನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್
ಮಂದಗತಿಯಲ್ಲಿ ಕೆರೆ ತುಂಬಿಸುವ ಯೋಜನೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೆ.ವೆಂಕಟೇಶ್ ಜುಲೈನಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲು ಸಜ್ಜುಗೊಳಿಸಲು ಸೂಚನೆ
RELATED ARTICLES