Wednesday, January 7, 2026
Google search engine

Homeರಾಜ್ಯಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಮೈಸೂರು/ಬಾಗಲಕೋಟೆ: ಕಳೆದ ತಿಂಗಳಲ್ಲಿ ಕೋಲಾರ, ಗದಗ ಸೇರಿದಂತೆ ರಾಜ್ಯದ ಹಲವು ಕಡೆ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್ ಬಂದಿದ್ದು, ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೊಮ್ಮೆ ಇಂತದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮೈಸೂರಿನ ಹಳೆ ಕೋರ್ಟ್ ಹಾಗೂ ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ತಪಾಸಣೆ ನಡೆಸಲಾಗಿದೆ.

ಇನ್ನೂ ಮೈಸೂರಿನಲ್ಲಿ ಮಧ್ಯಾಹ್ನ 1.55ಕ್ಕೆ ಮೂರು ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ, ಆತ್ಮಹತ್ಯಾ ದಾಳಿ ಮಾಡುವುದಾಗಿ ಬೆದರಿಕೆ ಇತ್ತು. ಈ ವೇಳೆ ಈ ಸಂದೇಶದಲ್ಲಿ ನ್ಯಾಯಾಧೀಶರನ್ನು ಸ್ಥಳಾಂತರಿಸುವಂತೆ ಎಚ್ಚರಿಸಲಾಗಿತ್ತು. ಮಾಹಿತಿ ಸ್ವೀಕರಿಸಿರುವ ನ್ಯಾಯಾಧೀಶರು, ಕಕ್ಷಿದಾರರು, ವಕೀಲರು ತಕ್ಷಣ ಕೋರ್ಟ್ ಆವರಣದಿಂದ ಹೊರಬಂದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ತಂಡ ತಕ್ಷಣ ಹೋಗಿ ಪರಿಶೀಲನೆ ನಡೆಸಿದೆ ಎನ್ನಲಾಗಿದೆ.

ಇದಲ್ಲದೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೂ ಮಧ್ಯಾಹ್ನ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿದ್ದು, ನಿಮ್ಮ ಜಿಲ್ಲಾ ನ್ಯಾಯಾಲಯದ ಕ್ರಿಟಿಕಲ್ ಸ್ಥಳಗಳಲ್ಲಿ ಬಾಂಬ್ ಇಟ್ಟಿದ್ದೇವೆ, ಮಧ್ಯಾಹ್ನದ ಊಟದ ಅವಧಿಯಲ್ಲಿ ಸ್ಫೋಟ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ಸಂದೇಶದ ಬೆನ್ನಲ್ಲೇ ಈ ವಿಷಯ ತಿಳಿದ ನ್ಯಾಯವಾದಿಗಳು, ಕಕ್ಷಿದಾರರು, ನೌಕರರು ಮತ್ತು ಸಾರ್ವಜನಿಕರು ಭಯಭೀತರಾಗಿ ಹೊರಬಂದಿದ್ದಾರೆ.

ಪೊಲೀಸ್‌, ಜಿಲ್ಲಾಡಳಿತ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ತೆರಳಿ ಕಟ್ಟಡ ಹಾಗೂ ಆವರಣದ ಸಂಪೂರ್ಣ ತಪಾಸಣೆ ನಡೆಸುತ್ತಿದೆ. ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಕಚೇರಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆವೊಡ್ಡಿದ್ದು, ಮಾಹಿತಿ ತಿಳಿದ ವಿಲ್ಸನ್ ಗಾರ್ಡನ್ ಹಾಗೂ ಎಸ್.ಆರ್.ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿಯಿಂದ ಪಾಸ್‌ಪೋರ್ಟ್ ಕಚೇರಿ ಆವರಣದಲ್ಲಿ ತಪಾಸಣೆ ನಡೆಲಾಗಿದೆ.

ಇದೇ ಮೊದಲೇನಲ್ಲ ಹುಸಿ ಬೆದರಿಕೆ :

ಡಿ.12ರಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಬಾಂಬ್ ಬೆದರಿಕೆ ಇಮೇಲ್ ಕೆಲಕಾಲ ಆತಂಕ ಸೃಷ್ಟಿಸಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ನಡೆಸಿದ್ದು, ತಮಿಳುನಾಡಿನ 13 ವರ್ಷದ ಬಾಲಕಿಯಿಂದ ಬಂದ ಹುಸಿ ಬೆದರಿಕೆ ಎಂದು ತಿಳಿದುಬಂದಿತ್ತು.

ಇನ್ನೂ ಡಿ.15ರಂದು ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಡಿಸಿ ಕಚೇರಿಗೆ ಬಾಂಬ್​​ ಬೆದರಿಕೆ ಹಾಕಲಾಗಿದ್ದು, ಪಾಕ್​ನ ಐಎಸ್​​ಐ ಮತ್ತು ಎಲ್​​​ಟಿಟಿಇ ಕಾರ್ಯಕರ್ತರ ಜೊತೆ ಸೇರಿ 5 ಬಾಂಬ್​ಗಳಿಂದ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಧಮ್ಕಿ ಹಾಕಿದ್ದರು.

RELATED ARTICLES
- Advertisment -
Google search engine

Most Popular