Friday, April 18, 2025
Google search engine

Homeರಾಜ್ಯಮಹನೀಯರ ಆದರ್ಶ ಪಾಲಿಸಬೇಕು

ಮಹನೀಯರ ಆದರ್ಶ ಪಾಲಿಸಬೇಕು


ಮೈಸೂರು: ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಮಹನೀಯರು ಸಮಾನತೆ, ಸಹೋದರತೆ, ಮಾನವೀಯತೆಯ ನೆಲೆಗಟ್ಟಿನಲ್ಲಿ ಸಮಾಜವನ್ನು ಕಟ್ಟಿ ಬೆಳೆಸಿದರು. ಇವರನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರ ಗುರು ಹೇಳಿದರು.
ಬುಧವಾರ ನಗರದ ಮಾನಸಗಂಗೋತ್ರಿಯಲ್ಲಿರುವ ಇಎಂಆರ್‌ಸಿ ಸಭಾಂಗಣದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಏರ್ಪಡಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾನವೀಯತೆಗೆ ಮತ್ತೊಂದು ಹೆಸರೇ ಬುದ್ಧ. ಯುದ್ಧ ಎಂದರೆ ಸರ್ವನಾಶ. ಬುದ್ಧ ಎಂದರೆ ಸರ್ವೋದಯ ಎಂಬ ಕಾಲಘಟ್ಟದಲ್ಲಿದ್ದೇವೆ. ಬುದ್ಧನನ್ನು ಅನುಸರಿಸಿದಲ್ಲಿ ಶಾಂತಿ, ಪ್ರೀತಿ ಎಲ್ಲವೂ ಸಿಗಲು ಸಾಧ್ಯ. ಬುದ್ಧ ಎಂದರೆ ಶಾಂತಿ, ಶಾಂತಿ ಎಂದರೆ ಬುದ್ಧ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರೇ ಬುದ್ಧನ ಬಗ್ಗೆ ಅಭಿಮಾನ ಹೊಂದಿದ್ದಾರೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯನ್ನು ಸದಾ ಸ್ಮರಿಸಬೇಕು. ಅವರು ನೀಡಿರುವ ಸಂವಿಧಾನವನ್ನು ದೇಶ ವಿದೇಶಗಳ ನಾಯಕರೇ ಮೆಚ್ಚಿಕೊಂಡಿದ್ದಾರೆ. ಜಗತ್ತಿನ ಶ್ರೇಷ್ಠ ಸಂವಿಧಾನ ಎಂದು ಕರೆದಿದ್ದಾರೆ. ಇದು ನಮ್ಮ ದೇಶಕ್ಕೆ ಹೆಮ್ಮೆಯ ವಿಚಾರ ಎಂದರು.
ನಮ್ಮ ದೇಶದಲ್ಲಿ ಎಲ್ಲಾ ಧರ್ಮದ ಜನರಿದ್ದಾರೆ. ಎಲ್ಲಾ ಜಾತಿಯ ಜನರಿದ್ದಾರೆ. ಎಲ್ಲಿಯೂ ಇಲ್ಲದಷ್ಟು ಜಾತಿಗಳು ಇಲ್ಲಿವೆ. ಆದರೆ, ಒಗ್ಗಟ್ಟಿಲ್ಲ. ಚರಿತ್ರೆಯನ್ನೇ ತಿರುಚಿ ಅಪಹಾಸ್ಯ ಮಾಡುವವರಿದ್ದಾರೆ. ಬ್ರಾಹ್ಮಣರು ಬ್ರಹ್ಮನ ಮಕ್ಕಳು ಎಂದು ಹೇಳುವವರಿದ್ದಾರೆ. ಇವೆಲ್ಲವೂ ಹೋಗಬೇಕು. ಜನರು ಬದಲಾಗಬೇಕು ಎಂದು ಈ ಮೂವರು ಮಹನೀಯರು ಹೇಳಿದ್ದಾರೆ. ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು. ಅವರ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳೂ ಒಂದೇ ಆಗಿದ್ದವು. ಬಡವರು, ಮಹಿಳೆಯರು, ದಲಿತರ ಉದ್ಧಾರಕ್ಕಾಗಿ ಅಂಬೇಡ್ಕರ್ ಅವರು ಸಮಾನತೆಯ ಸಂವಿಧಾನ ನೀಡಿದರೆ, ಮನುಕುಲ ಒಂದೇ ಎಂದು ಸಾರಿದವರು ಬಸವಣ್ಣ ಹಾಗೂ ಬುದ್ಧ. ಇವರನ್ನು ನೀವು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ ವಹಿಸಿದ್ದರು. ವಿದ್ಯಾವರ್ಧಕ ಕಾನೂನು ಕಾಲೇಜಿನ ಡಾ.ಕೆ.ಎಲ್.ಚಂದ್ರಶೇಖರ್, ಪ್ರಾಧ್ಯಾಪಕರಾದ ಡಾ.ಸಿ.ಕೆ.ಪುಟ್ಟಸ್ವಾಮಿ, ಡಾ.ಎನ್.ಮಮತ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular