Sunday, April 20, 2025
Google search engine

Homeಸ್ಥಳೀಯಮಾತು ತಾಯಿ ನೀಡಿದ ಎರಡನೇ ಅಮೃತ

ಮಾತು ತಾಯಿ ನೀಡಿದ ಎರಡನೇ ಅಮೃತ

ಮೈಸೂರು: ಮಾತು ತಾಯಿ ನಮಗೆ ನೀಡಿದ ಎರಡನೇ ಅಮೃತ ಎಂದು ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರು ತಿಳಿಸಿದರು.
ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಆಯೋಜಿಸಿದ್ದ ೩೦೨ನೇ ಶಿವಾನುಭವ ದಾಸೋಹ ಉಪನ್ಯಾಸ ಮಾಲೆಯಲ್ಲಿ ಮಾತನಾಡಿ, ಮಾತು ಎಂಬುದು ತಾಯಿ ನಮಗೆ ಕೊಟ್ಟ ಅಪೂರ್ವ ಸಂಪತ್ತು. ಮಾತೆಂಬುದು ಮನುಷ್ಯ ಮನುಷ್ಯನ ನಡುವೆ ಪ್ರಾಥಮಿಕ ಸ್ತರದಲ್ಲಿ ವ್ಯವಹರಿಸುವ ಪ್ರಮುಖ ಸಾಧನವಾಗಿದೆ. ಶರಣರು, ವಚನಕಾರರು ಅವರ ವಚನಗಳಲ್ಲಿ ಮಾತು ಎಲ್ಲಕ್ಕಿಂತ ದೊಡ್ಡದು ಎಂದು ಸಾರಿದ್ದಾರೆ ಎಂದು ತಿಳಿಸಿದರು.
ಅಲ್ಲಮ ಪ್ರಭುದೇವರು ವಚನವನ್ನು ಮಾತು ಎಂದು, ಬಸವಣ್ಣನವರು ವಚನವನ್ನು ನುಡಿ ಎಂದು, ದೇವರ ದಾಸಿಮಯ್ಯನವರು ಸೂಳ್ನುಡಿ ಎಂದು ಹೇಳಿದ್ದಾರೆ. ಮಾತೆಂಬುದೇ ಜ್ಯೋತಿರ್ಲಿಂಗ, ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಅಲ್ಲಮಪ್ರಭುದೇವರು ಮತ್ತು ಬಸವಣ್ಣನವರು ಹೇಳುವ ಮೂಲಕ ಮಾತಿನ ಮಹತ್ವವನ್ನು ಸಾರಿದ್ದಾರೆ. ಮಾತೆಂಬುದು ಮನುಷ್ಯನಿಗೆ ಇರುವ ವಿಶೇಷ ಶಕ್ತಿ, ಸಾಮರ್ಥ್ಯ ಹಾಗೂ ಸೌಲಭ್ಯ. ಮಾತಿನ ಮೂಲಕ ಪ್ರಾಥಮಿಕ ಸಂವಹನವನ್ನು ಎಲ್ಲ ಬಗೆಯ ಬೇಧ-ಭಾವ ಮೀರಿ ಸ್ಥಾಪಿಸುವ ಕೆಲಸವನ್ನು ೧೨ನೇ ಶತಮಾನದ ವಚನಕಾರರು ಮಾಡಿದ್ದಾರೆ ಎಂದರು.
ಪ್ರಾಣಿ-ಪಕ್ಷಿಗಳು ಧ್ವನಿಯ ಮೂಲಕ ಹೃದಯ ಸಂವಾದ ನಡೆಸಿದರೆ, ಮನುಷ್ಯ ಮಾತಿನ ಮೂಲಕ ಸಂವಹನ ನಡೆಸುತ್ತಾನೆ. ೧೨ನೇ ಶತಮಾನದ ಶರಣರು, ವಚನಕಾರರು ಮಾತಿನ ಮೂಲಕ ದೇವರ ಜೊತೆಯೂ ಮಾತನಾಡಿದರು. ಶರಣರು ಮಾತನ್ನು ಬರೀ ಮಾತೆಂದು ಪರಿಗಣಿಸದೇ ಮಾತು ಎಂಬ ಬೆಳಕು ಇಲ್ಲದಿದ್ದರೆ ೧೪ ಲೋಕಗಳೂ ಕತ್ತಲೆಯಲ್ಲಿ ಮುಳುಗಿರುತ್ತಿದ್ದವು ಎಂದು ಕಾವ್ಯ ಮಿಂಮಾಸಕ ದಂಡಿಯ ಮಾತಿಗೆ ವಚನಗಳ ಮೂಲಕ ಅಪೂರ್ವವಾದ ವ್ಯಾಖ್ಯಾನವನ್ನು ಬರೆದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ, ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ, ಪ್ರೊ.ಪಿ.ಎಂ.ಮಹದೇವಸ್ವಾಮಿ, ಸಿದ್ಧಮಲ್ಲಿಕಾರ್ಜುನಸ್ವಾಮಿ, ಆರ್.ಎಸ್.ಕುಮಾರ್ ಸೇರಿದಂತೆ ಹಲವರು ಇದ್ದರು.

RELATED ARTICLES
- Advertisment -
Google search engine

Most Popular