ಮೈಸೂರು: ಪರಿಸರದ ಪರಿಕಲ್ಪನೆ ಭೌತಿಕ ಮತ್ತು ಜೈವಿಕ ಪ್ರಪಂಚದ ಎಲ್ಲ ಅಂಶಗಳನ್ನು ಮತ್ತು ಅವುಗಳ ಪರಸ್ಪರ ಕ್ರಿಯೆಗಳನ್ನು ಸೂಚಿಸುವುದರ ಜತೆಗೆ ಪರಿಸರ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ಅಣ್ಣಯ್ಯ ತಿಳಿಸಿದರು.
ಡಾ.ಎಂ.ಎಚ್.ಮರೀಗೌಡ ಹಾರ್ಟಿಕಲ್ಚರಲ್ ಎಜುಕೇಷನ್ ಆಂಡ್ ರಿಸರ್ಚ್ ಫೌಂಡೇಷನ್ ಹಾಗೂ ವಿಶ್ವ ಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು ವತಿಯಿಂದ ನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ಸಸಿ ನೆಡುವ ಹಾಗೂ ಪರಿಸರ ವಿಜ್ಞಾನ ಕುರಿತು ಸ್ಮಾರಕೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿಯ ಮೇಲೆ ವಾಸಿಸುವ ಜೀವಿಗಳಿಗೆ ಆಹಾರ, ವಸತಿ, ಬಟ್ಟೆ, ನೀರು, ಸೂರ್ಯನ ಬೆಳಕು, ಗಾಳಿ ಹೀಗೆ ಜೀವನಕ್ಕೆ ಬೇಕಾದ ಎಲ್ಲಾ ವಸ್ತುಗಳ ಮೂಲ ಪರಿಸರ. ನಗರೀಕರಣ ಮತ್ತು ಕೈಗಾರಿಕೀಕರಣದ ಕ್ಷಿಪ್ರ ಬೆಳವಣಿಗೆಯಿಂದಾಗಿ ಪರಿಸರ ಅಸಮತೋಲನ ಕಂಡು ಬಂದಿದೆ. ಇಂತಹ ಆಧುನಿಕ ಬೆಳವಣಿಗೆಗಳು ಅಭಿವೃದ್ಧಿಯ ಸಂಕೇತವೇ ಇರಬಹುದು. ಆದರೆ ಅದರಿಂದಾಗುವ ಅನಾಹುತ ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದರು.
ಪರಿಸರದ ಅಸಮತೋಲನೆಗೆ ಮಾನವನ ದುರಾಸೆಯೇ ಕಾರಣ ಎಂದು ಹೇಳಿ. ಮನುಷ್ಯನ ಕೃತ್ಯದಿಂದ ಉಂಟಾಗುವ ಪರಿಸರ ಮಾಲಿನ್ಯದ ವಿವಿಧ ಪ್ರಕಾರಗಳು ಮತ್ತು ವಿಕಿರಣದ ಪರಿಣಾಮದಿಂದ ಆಗುವ ಓರೆಮಾನ ನಾಶದ ಕುರಿತು ವೈಜ್ಞಾನಿಕವಾಗಿ ತಿಳಿಸಿ ಅದರ ಪರಿಣಾಮದ ಅರಿವು ಮೂಡಿಸಿದರು ಹಾಗೂ ಪರಿಸರದ ಉಳಿವಿಗಾಗಿ ಮಾನವನ ಕರ್ತ್ಯವವನ್ನು ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಎಂ.ನಾಗರಾಜು ಮಾತನಾಡಿ, ಸಾವಯುವ ಕೃಷಿಯಲ್ಲಿ ರಸಗೊಬ್ಬರ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವುದಲ್ಲದೆ ಇದರ ಪರಿಣಾಮ ಬೆಳೆಗಳ ಇಳುವರಿ ಮೇಲೂ ಪ್ರಭಾವ ಬೀರುತ್ತಿದೆ. ರೈತರು ಯಥೇಚ್ಚವಾಗಿ ರಸಗೊಬ್ಬರ ಬಳಕೆ ಮಾಡಿ ಬೆಳೆ ಬೆಳೆಯುತ್ತಿರುವುದರಿಂದ ಆಹಾರದಲ್ಲಿ ನಿಧಾನಗತಿಯಲ್ಲಿ ವಿಷವು ಮಿಶ್ರಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ರಾಸಾಯನಿಕ ಗೊಬ್ಬರಗಳಿಂದ ಬೆಳೆಯಲಾಗುವ ವಿಷಯುಕ್ತ ಆಹಾರ ಬೆಳೆಗಳ ಬದಲಿಗೆ ಇಂದು ಜಗತ್ತಿನಾದ್ಯಂತ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ರೈತ ದೇಶದ ಬೆನ್ನೆಲೆಬು ಪ್ರತಿಯೊಬ್ಬ ಪ್ರಜೆಯ ಆಹಾರ ಭದ್ರತೆ ಒದಗಿಸಿ ಈ ದೇಶ ಮುನ್ನಡೆಸುವವನಿಗೆ ಸರಕಾರ ನೀಡುವ ಯೋಜನೆಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕುವೆಂಪು ವಿದ್ಯಾವರ್ದಕ ಟ್ರಸ್ಟ್ ಅಧ್ಯಕ್ಷ ಡಾ.ಜೆ.ಶಶಿಧರ್ ಪ್ರಸಾದ್, ತೋಟಗಾರಿಕೆ ಇಲಾಖೆ ನಿವೃತ್ತ ನಿರ್ದೇಶಕ ಡಾ.ಎಲ್.ಹನುಮಯ್ಯ, ಡಾ.ಎಂ.ಎಚ್.ಎಂ.ಪೌಂಡೇಶನ್ ಉಪಾಧ್ಯಕ್ಷ ಪಿ.ಸಿ.ಶೇಖರ್, ಕುವೆಂಪು ವಿದ್ಯಾವರ್ದಕ ಟ್ರಸ್ಟ್ ಕಾರ್ಯದರ್ಶಿ ಶಿವಸುಂದರ ಸತ್ಯೇಂದ್ರ, ತೋಟಗಾರಿಕೆ ಇಲಾಖೆ ಉಪ ನಿರ್ದೆಶಕ ಹೆಚ್.ಎಂ.ನಾಗರಾಜು, ವಿಶ್ವ ಮಾನವ ಟ್ರಸ್ಟ್ ಅಧ್ಯಕ್ಷ ರಾಮೇಗೌಡ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.