ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ತನಿಖೆಯ ಮೇಲೆ ನನಗೆ ನಂಬಿಕೆ ಇಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಿಬಿಐ ತನಿಖೆ ನಡೆಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಡಿಸೆಂಬರ್ 19 ರಂದು ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಪ್ರಕರಣ ಸಂಬಂಧ ಈವರೆಗೂ ಕೆಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗಿಲ್ಲ. ಹೀಗಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು.ಅಲ್ಲದೆ, ದೂರುದಾರ ಸ್ನೇಹಮಯಿ ಕೃಷ್ಣ ವಿನಾಕಾರಣ ಅಡ್ವೋಕೇಟ್ ಜನರಲ್ ವಿರುದ್ದ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಸ್ನೇಹಮಯಿ ಕೃಷ್ಣ ಪರ ವಕೀಲ ವಾದ ಮಂಡಿಸಿ, ಮುಡಾ ಹಗರಣದ ಆರೋಪಿ ಸಿಎಂ ಆಗಿದ್ದಾರೆ. ಅವರೇ ರಾಜ್ಯದ ಮುಖ್ಯಸ್ಥರಾಗಿದ್ದು, ರಾಜ್ಯ ಸರ್ಕಾರದ ಹಿಡಿತದಲ್ಲಿಲ್ಲದ ಸಿಬಿಐ ಅಥವಾ ಬೇರೆ ಸ್ವತಂತ್ರ ಸಂಸ್ಥೆಗೆ ತನಿಖೆ ವಹಿಸಲು ಕೋರಿದರು. ಅಲ್ಲದೆ, ಪ್ರಕರಣದ ಎಲ್ಲ ಮಾಹಿತಿ ನ್ಯಾಯಪೀಠಕ್ಕೆ ಗೊತ್ತಿದೆ. ಹೀಗಾಗಿ ತನಿಖೆ ವಿಶ್ವಾಸಾರ್ಹವಾಗಲು ಸ್ವತಂತ್ರ ತನಿಖೆ ಅಗತ್ಯವೆಂದು ತಿಳಿಸಿದರು. ಬಳಿಕ ನ್ಯಾಯಾಧೀಶರು ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.